More

    ಮದ್ವೆ ಮಾಡಿದ್ರೆ ಮಕ್ಳು ಸರಿಯಾಗಲ್ಲ ತಾಯಿ…ಆಗಿದ್ದಾಯ್ತು… ಮೊದ್ಲು ಸೊಸೆಯನ್ನು ಗಟ್ಟಿಗೊಳಿಸಿ…

    ಮದ್ವೆ ಮಾಡಿದ್ರೆ ಮಕ್ಳು ಸರಿಯಾಗಲ್ಲ ತಾಯಿ...ಆಗಿದ್ದಾಯ್ತು... ಮೊದ್ಲು ಸೊಸೆಯನ್ನು ಗಟ್ಟಿಗೊಳಿಸಿ...ನನಗೀಗ 66 ವರ್ಷ. ಇಬ್ಬರು ಗಂಡುಮಕ್ಕಳು. ಸಮಸ್ಯೆ ಬಂದಿರುವುದು ಎರಡನೆಯ ಮಗನಿಂದ. ನನ್ನ ಗಂಡ ನಿವೃತ್ತಿಯಾಗಲು ಇನ್ನೂ ಆರುತಿಂಗಳು ಇರುವಾಗಲೇ ತೀರಿಕೊಂಡರು. ಹಾಗಾಗಿ ಅವರ ಸರ್ಕಾರಿ ನೌಕರಿಯನ್ನು ಅನುಕಂಪದ ಆಧಾರದ ಮೇಲೆ ನನ್ನ ಎರಡನೇ ಮಗನಿಗೆ ಕೊಟ್ಟಿದ್ದಾರೆ.

    ನೌಕರಿಗೆ ಹಾಜರಾಗುವಾಗ `ಕಡೆಯವರೆಗೂ ತಾಯಿಯ ಜವಾಬ್ದಾರಿ ನನ್ನದು ಮತ್ತು ಮದುವೆಯಾದ ನಂತರವೂ ತಾಯಿ ಮತ್ತು ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ, ಮನೆಯ ಖರ್ಚುಗಳನ್ನೂ ನಿಭಾಯಿಸುತ್ತೇನೆ’ ಎಂದೆಲ್ಲ ಪ್ರಮಾಣ ಮಾಡಿ ನೌಕರಿ ಗಿಟ್ಟಿಸಿದ. ಆದರೆ ಕೆಲಸಕ್ಕೆ ಸೇರಿದ ನಂತರ ಒಮ್ಮೆಯೂ ಒಂದು ಚಿಕ್ಕಾಸನ್ನೂ ಮನೆಗೆ ಕೊಟ್ಟಿಲ್ಲ. ಮದುವೆ ಮಾಡಿದರೆ ಸರಿಹೋದಾನೆಂದು ಮದುವೆ ಮಾಡಿದೆ. ದೊಡ್ಡ ಮಗನಿಗೆ ಮನೆಯಲ್ಲಿ ಊಟ ಹಾಕಲು ಮತ್ತೊಂದು ವ್ಯಕ್ತಿ ಹೆಚ್ಚಾಯಿತೇ ವಿನಾ ಇವನೇನೂ ಸುಧಾರಿಸಲಿಲ್ಲ. ಮೈತುಂಬ ಸಾಲ ಮಾಡಿಕೊಂಡಿದ್ದೇನೆ. ದಿನಬೆಳಗಾದರೆ ಮನೆ ಮುಂದೆ ಸಾಲಗಾರರ ಕಾಟ. ಅವನಿಗೆ ಕುಡಿಯುವ, ಸೇದುವ ಯಾವ ಕೆಟ್ಟ ಚಟಗಳೂ ಇಲ್ಲ. ಸ್ನೇಹಿತರನ್ನು ಹೊಟೇಲಿಗೆ ಕರೆದುಕೊಂಡು ಹೋಗಿ, ಅವರು ಕೇಳಿದ್ದನ್ನು ಕೊಡಿಸುವುದು, ಅವರ ಮನೆಗೆ ಸಹಾಯ ಮಾಡುವುದು, ಇಂಥವೇ ಅವನ ಹವ್ಯಾಸಗಳು. ಹೊರಗೇನೋ ಅವನಿಗೆ ಒಳ್ಳೆಯ ಹೆಸರಿದೆ. ಮನೆಯಲ್ಲಿ ಹೆಂಡತಿ, ತಾಯಿಯ ಪಾಲಿಗೆ ಏನೂ ಇಲ್ಲ. ಅವನ ಹೆಂಡತಿ ಒಳ್ಳೆಯ ಹುಡುಗಿ.

    ಅವನು ಮಹಾ ಕೋಪಿಷ್ಠ. ಅವನೊಂದಿಗೆ ಮಾತಾಡುವುದೇ ಕಷ್ಟ. ನನಗೆ ಈ ಸೊಸೆಯನ್ನು ನೋಡಿದರೆ ಬಹಳ ಕನಿಕರವಾಗುತ್ತದೆ. ಇಬ್ಬರು ಸೊಸೆಯಂದಿರೂ ದೇವರು ಮತ್ತು ಸಮಾಜಕ್ಕೆ ಹೆದರುತ್ತಾರೆ. ಈ ಮಗ ನಮಾಜಕ್ಕೆ ಸಹ ಮಾಡುವುದಿಲ್ಲ. ಯಾರ ಬಗ್ಗೆಯೂ ಹೆದರಿಕೆಯಿಲ್ಲ. ಅಣ್ಣ ಮನೆಯ ಜವಾಬ್ದಾರಿಯನ್ನೆಲ್ಲ ಸರಿದೂಗಿಸಿಕೊಂಡು ಹೋಗುತ್ತಿದ್ದಾನಲ್ಲ, ಅದಕ್ಕೆ ಹೀಗಾಡುತ್ತಿದ್ದಾನೇನೋ ಎನಿಸುತ್ತದೆ. ಅವನ ಸಂಸಾರವನ್ನು ಬೇರೆ ಮನೆ ಮಾಡಿ ಇಟ್ಟರೆ ಸರಿಯಾಗಬಹುದೇನೋ ಅಂದುಕೊಳ್ಳುತ್ತೇನೆ. ಆದರೆ ಅವನು ಹೀಗೇ ಇದ್ದರೆ ಅವನ ಹೆಂಡತಿ ನರಳ ಬೇಕಾಗುತ್ತದೆ. ನಮ್ಮ ಕುಟುಂಬವನ್ನು ನಂಬಿ ಬಂದ ಹುಡುಗಿಯನ್ನು ಕಷ್ಟಕ್ಕೆ ಗುರಿ ಮಾಡಲು ನನಗೆ ಇಷ್ಟವಿಲ್ಲ. ಜತೆಗೆ ಸಾಲಗಾರರು ಮನೆಯ ಹತ್ತಿರ ಬಂದು ಕೂಗಾಡಿದರೆ, ಇಬ್ಬರೂ ಏನಾದರೂ ಮಾಡಿಕೊಂಡುಬಿಟ್ಟರೆ ಅಂತ ಭಯ. ಏನು ಮಾಡಲಿ?

    ಉತ್ತರ: ನಿಮ್ಮ ಸುದೀರ್ಘ ಪತ್ರವನ್ನು ಓದಿ `ತಾಯಿಯ ಜವಾಬ್ದಾರಿಗಳು ಆಕೆ ಸಾಯುವವರೆಗೆ ಮುಗಿಯುವುದೇ ಇಲ್ಲವಲ್ಲ ಎನಿಸಿ ಬೇಸರವಾಯಿತು. ನಿಮ್ಮ ಪತ್ರದಿಂದಲೇ ಒಂದಿಷ್ಟು ವಿಷಯ ಸಂಗ್ರಹಿಸಿ ಅದನ್ನು ವಿಶ್ಲೇಷಣೆ ಮಾಡಲು ಪ್ರಯತ್ನಿಸುತ್ತೇನೆ. ನಿಮ್ಮ ಮಗನ ಈ ಬೇಜವಾಬ್ದಾರಿಯ ನಡವಳಿಕೆ ಇತ್ತೀಚೆಗೆ ಬಂದದ್ದಲ್ಲ. ಬಹುಶಃ ಬಾಲ್ಯದಿಂದಲೇ ಇದ್ದಿರಬಹುದು. `ಮದುವೆ ಮಾಡಿದರೆ ಸುಧಾರಿಸುತ್ತಾನೇನೋ ಎಂದು ಮದುವೆ ಮಾಡಿದೆ ಎಂದು ನೀವೇ ಬರೆದಿದ್ದೀರಿ. ಅಂದರೆ ಮದುವೆಗೂ ಮೊದಲೇ ಅವನು ಬೇಜವಾಬ್ದಾರಿಯಾಗಿ ನಡೆದುಕೊಳ್ಳುತ್ತಿದ್ದ ಅಲ್ಲವೇ?

    ನಮ್ಮ ಸಮಾಜದಲ್ಲಿ ಇದೊಂದು ಮಹಾ ತಪ್ಪು ಕಲ್ಪನೆ. ಹುಡುಗಿಯಾಗಲಿ, ಹುಡುಗನಾಗಲಿ ಹಾದಿ ತಪ್ಪಿದರೆ, ಮದುವೆ ಮಾಡಿದರೆ ಸರಿಹೋಗುತ್ತಾರೆ ಎಂದು ಭ್ರಮಿಸುವುದು! ನಿಜವಾಗಿ ನೋಡಿದರೆ ಇಂಥವರಿಗೆ ಮದುವೆಗೆ ಮೊದಲೇ ಕೌನ್ಸಲಿಂಗ್ ಕೊಡಿಸಬೇಕು. ಅವರು ತಮ್ಮ ದೋಷಗಳನ್ನೆಲ್ಲಾ ನಿವಾರಿಸಿಕೊಂಡರೆ ಮಾತ್ರ ಮದುವೆ ವಾಡಬೇಕು. ನಮ್ಮ ಸಮಾಜವೊ ಇಂಥ ಸಮಸ್ಯೆಗಳಿಗೆ ಮದುವೆಯೇ ದಿವ್ಯ ಔಷಧ ಎಂದು ನಂಬಿ ಮತ್ತೊಂದು ಜೀವವನ್ನು ಸಂಕಷ್ಟಕ್ಕೆ ದೂಡುತ್ತದೆ. ಇರಲಿ, ನಿಮಗೀಗ ಒಂದೆರಡು ದಾರಿಗಳಿವೆ. ಮೊದಲನೆಯದು, ನಿಮ್ಮ ಮಗನ ಹೊರಗಿನ ಚಲನವಲನಗಳು ನೀವು ಭಾವಿಸಿದಷ್ಟು ಶುದಟಛಿವಾಗಿರಲಾರದು. ಕೇವಲ ಸ್ನೇಹಿತರಿಗೆ ತಿಂಡಿ ಕೊಡಿಸುವುದು ಮತ್ತು ಅವರ ಮನೆಗೆ ಸಹಾಯ ಮಾಡುವುದು ಇಷ್ಟಕ್ಕೇ ಅವನ ಸಂಬಳವೂ ಸಾಲದೆ, ಸಾಲ ಮಾಡುತ್ತಾನೆಂದರೆ ನಂಬುವುದು ಸ್ವಲ್ಪ ಕಷ್ಟ. ಅವನಿಗೆ ಜೂಜಾಡುವುದೋ, ಮತ್ತೊಂದೋ ಚಟ ಹತ್ತಿರಬಹುದು. ಇದನ್ನು ನೀವು ಪರಿಶೀಲಿಸಬೇಕಾಗುತ್ತದೆ. ಅವನಿಗೆ ಗೊತ್ತಿಲ್ಲದಂತೆ ನಿಮ್ಮನ್ನು ಗೌರವಿಸುವಂಥ ಅವನ ಗೆಳೆಯರ ಹತ್ತಿರ ಮಾತಾಡಿ ನಿಜವನ್ನು ತಿಳಿದುಕೊಳ್ಳಿ. ಹಾಗೇನಾದರೂ ಹೊರಗೆ ಕೆಟ್ಟ ಹವ್ಯಾಸಗಳಿದ್ದರೆ ನಿಮ್ಮ ಧರ್ಮಗುರುಗಳ ಸಹಾಯವನ್ನು ಪಡೆದು ಅವನನ್ನು ತಿದ್ದುವ ಪ್ರಯತ್ನ ಮಾಡಿ. ನಿಮ್ಮ ಧರ್ಮದಲ್ಲಿ ಈ ರೀತಿಯ ಒಳ್ಳೆಯ ವ್ಯವಸ್ಥೆಯಿದೆ. ಅದನ್ನು ನೀವು ಬಳಸಿಕೊಳ್ಳಿ.

    ಎರಡನೆಯದಾಗಿ `ಬೇರೆ ಮನೆ ಮಾಡಿದರೆ ಕಷ್ಟಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ‘ ಎನ್ನುವುದು ನಿಮ್ಮ ಭಯವಷ್ಟೇ. ಹಾಗೆ ಆಗದಿರಲೂಬಹುದು. ನೀವು ನಿಮ್ಮ ಸೊಸೆಯನ್ನು ಗಟ್ಟಿಗೊಳಿಸಿ. ಆಕೆ ವಿದ್ಯಾವಂತೆ ಎಂದು ನೀವೇ ಬರೆದಿದ್ದೀರಿ. ಆಕೆಯನ್ನು ಉದ್ಯೋಗಸ್ಥಳನ್ನಾಗಿ ಮಾಡಿ. ಧೈರ್ಯ ಮತ್ತು ಆರ್ಥಿಕ ಸ್ವಾತಂತ್ರೃ ಬಂದರೆ ಅವಳ ಬದುಕನ್ನು ಅವಳೇ ನಿಭಾಯಿಸಿಕೊಳ್ಳಬಹುದು. ಎಲ್ಲರೂ ನಿಷ್ಕ್ರಿಯರಾಗಿ `ಅವನೇ ಸರಿ ಹೋಗಲಿ ‘ ಎಂದು ಕಾಯುತ್ತ ಕೂಡುವುದು ನಿರರ್ಥಕವಲ್ಲವೇ?

    ಈಗಿಂದೀಗಲೇ ಬೇರೆ ಮನೆ ಮಾಡದಿದ್ದರೂ, ನಿಮ್ಮ ಸೊಸೆ ತನ್ನ ಮನೆಯನ್ನು ತಾನೇ ನಿಭಾಯಿಸಿಕೊಳ್ಳುವ ಗಟ್ಟಿತನ ಬಂದಮೇಲೆ ಅವರ ಸಂಸಾರವನ್ನು ಬೇರೆ ಮಾಡಬಹುದಲ್ಲವೇ? ನಿಮ್ಮ ಮಗನಿಗೆ `ಬಿಹೇವಿಯರ್ ಡಿಸಾರ್ಡರ್’ ಇರಬಹುದು. ಸಾಮಾಜಿಕ ಮತ್ತು ಸಾಂಸಾರಿಕ ಬದ್ಧತೆಗಳನ್ನು ಆತ ಕಲಿತೇ ಇಲ್ಲವೆನಿಸುತ್ತದೆ. ಬಾಲ್ಯದಿಂದಲೂ ಬಿಂದಾಸ್ ಆಗಿ ಬದುಕಿದ್ದಾನೆ. ಮನೆಯಲ್ಲಿ ಅವನಿಗೆ ಸಾಕಷ್ಟು ಮೆಚ್ಚುಗೆ ಸಿಕ್ಕದೇ ಇರುವುದರಿಂದ ಸ್ನೇಹಿತರಿಗೆ ತಿನ್ನಿಸಿ ಕುಡಿಸಿ, ಅವರಿಂದ ಮೆಚ್ಚುಗೆ ಪಡೆಯುವ ಪ್ರಯತ್ನ ಮಾಡುತ್ತಾನೆ. ಇದೊಂದು `ಮಾನಸಿಕ ವ್ಯತ್ಯಯ ‘. ನೀವು ಈಗಾಗಲೇ ಚಿಂತೆ ಮಾಡಿಮಾಡಿ ರೋಗಗಳನ್ನು ಆಹ್ವಾನಿಸಿಕೊಂಡಿದ್ದೀರಿ. ಇನ್ನು ಇದು ಸಾಕು. ನೆಮ್ಮದಿ ಸಿಗುವಂಥ ಪ್ರಯತ್ನಗಳನ್ನು ಮಾಡಿ. ಖಂಡಿತ ಒಳ್ಳೆಯದಾಗುತ್ತದೆ.

    ಡಾ.ಶಾಂತಾ ನಾಗರಾಜ್​ ಅವರ ಇನ್ನಷ್ಟು ಸಲಹೆಗಳಿಗೆ ಇಲ್ಲಿ ಕ್ಲಿಕ್ಕಿಸಿ:

    https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/

    ಪತ್ನಿಯನ್ನು ನೋಡಿದರೆ ಮೃತ ಪ್ರೇಯಸಿಯೇ ಕಾಣುತ್ತಾಳೆ: ಸಂಸಾರ ಮಾಡಲಾಗುತ್ತಿಲ್ಲ, ಏನು ಮಾಡಲಿ?

    ಗಂಡ ಒಳ್ಳೆಯವರು, ಮಕ್ಕಳು ಟಾಪರ್ಸ್​, ಅತ್ತೆ-ಮಾವ ಎಂದ್ರೆ ಪ್ರೀತಿ… ಆದ್ರೂ ನಂದೇನೋ ಸಮಸ್ಯೆ ಮೇಡಂ…

    ಪತ್ನಿಗೆ ಕೋಪ ಬಂದಾಗ ಒದೀತಾಳೆ, ಸೌಟಿನಿಂದ ಹೊಡೀತಾಳೆ, ಸಂಶಯ ಪಿಶಾಚಿ ಬೇರೆ- ನಾ ಏನು ಮಾಡಲಿ?

    ಆತ ಕೈಲಾಗದ ಗಂಡನಮ್ಮಾ… ಡಿವೋರ್ಸ್​ ಕೊಡ್ತೇನೆಂದದ್ದಕ್ಕೆ ಇಷ್ಟು ಓದಿರೋ ನೀನು ಹೆದರಿಬಿಟ್ಯಾ? ಛೇ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts