

ನ್ಯೂಯಾರ್ಕ್: ಅದೃಷ್ಟ ಕೆಟ್ಟರೆ ಎಂತೆಂಥ ಅನಾಹುತಗಳು ಆಗುತ್ತವೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಅಮೆರಿಕದಲ್ಲಿ ನಡೆದ ಕರುಣಾಜನಕ ಕಥೆಯಿದು.
ಫ್ರಾಂಕ್ ಎಂಬ ಕಡುಬಡವನಿಗೆ 20 ವರ್ಷಗಳ ಹಿಂದೆ ಇಲ್ಲಿಯ ಕೋರ್ಟ್ 20 ವರ್ಷಗಳ ಶಿಕ್ಷೆ ವಿಧಿಸಿತ್ತು. ಅಂದ ಮಾತ್ರಕ್ಕೆ ಅವನೇನು ಕೊಲೆ, ದರೋಡೆ, ಸುಲಿಗೆ ಮಾಡಿರಲಿಲ್ಲ. ಬದಲಿಗೆ ಸೂಪರ್ಮಾರ್ಕೆಟ್ ಒಂದರಿಂದ ಎರಡು ಟೀ ಷರ್ಟ್ ಕದ್ದಿದ್ದ. ಕಳ್ಳತನ ಮಾಡುವುದು ಅಪರಾಧವಾದರೂ ಇಂಥ ದೊಡ್ಡ ಶಿಕ್ಷೆ ವಿಧಿಸುವಷ್ಟು ಕ್ರೂರ ಅಪರಾಧ ಆತ ಮಾಡಿರಲಿಲ್ಲ.
ಆದರೆ ಅದ್ಯಾಕೋ ಇಲ್ಲಿಯ ಕೋರ್ಟ್ ಇಂಥ ಕಠಿಣ ಶಿಕ್ಷೆ ವಿಧಿಸಿತ್ತು. 23 ವರ್ಷಗಳ ಶಿಕ್ಷೆಯನ್ನು ವಿಧಿಸಲಾಗಿತ್ತು. ನಂತರ ಅನೇಕ ಮಂದಿ ಇದರ ವಿರುದ್ಧ ಹೋರಾಟ ನಡೆಸಿದ್ದರು. ಇಷ್ಟು ಚಿಕ್ಕ ಕಳ್ಳತನಕ್ಕೆ ಇಂಥ ಘೋರ ಶಿಕ್ಷೆ ವಿಧಿಸಿರುವುದು ಅವಮಾನವೀಯ ಎಂದಿದ್ದರು. ನಂತರ ಇದನ್ನು ಪರಿಗಣನೆಗೆ ತೆಗೆದುಕೊಂಡಿದ್ದ ಕೋರ್ಟ್, ಶಿಕ್ಷೆಯನ್ನು ಮೂರು ವರ್ಷ ಕಡಿತಗೊಳಿಸಿ 20 ವರ್ಷಕ್ಕೆ ಇಳಿಸಿತ್ತು.
ಕಡು ಬಡವನಾಗಿದ್ದ ಫ್ರಾಂಕ್ಗೆ ಪತ್ನಿ, ಒಬ್ಬ ಮಗನಿದ್ದ. 47ನೇ ವಯಸ್ಸಿಗೆ ಕಳ್ಳತನ ಮಾಡುವಾಗ ಆತ ಸಿಕ್ಕಿಬಿದ್ದಿದ್ದ. ಈಗ ಫ್ರಾಂಕ್ಗೆ 67 ವರ್ಷ. ದುರದೃಷ್ಟದ ವಿಷಯ ಎಂದರೆ, ಫ್ರಾಂಕ್ ಜೈಲಿನಿಂದ ಬಿಡುಗಡೆಯಾಗುವಷ್ಟರಲ್ಲಿಯೇ ಆತನ ಪತ್ನಿ, ಮಗ ಅಷ್ಟೇ ಅಲ್ಲದೇ ಇಬ್ಬರು ಸಹೋದರರೂ ಮೃತಪಟ್ಟಿದ್ದರು. ಕುಟುಂಬಕ್ಕೆ ಆಸೆಯಾಗಿದ್ದ ಫ್ರಾಂಕ್ ಜೈಲು ಅನುಭವಿಸಿದ ಮೇಲೆ ಆತನ ಬಿಡುಗಡೆಗಾಗಿ ಹಲವಾರು ಕಡೆ ತಿರುಗಾಡಿ ವಿಫಲವಾಗಿದ್ದ ಕುಟುಂಬ ನಂತರ ತುತ್ತು ಅನ್ನಕ್ಕೂ ಪರದಾಡುವ ಸಮಸ್ಯೆಯಾಗಿ ಮೃತಪಟ್ಟಿತ್ತು. ಫ್ರಾಂಕ್ ಮನೆಗೆ ಮರಳುವಷ್ಟರಲ್ಲಿ ಮನೆ ಮೃತ್ಯುಕೂಪವಾಗಿತ್ತು. ಇದೀಗ ಎಲ್ಲರನ್ನೂ ಕಳೆದುಕೊಂಡಿರುವ ಫ್ರಾಂಕ್ ತನ್ನ ದುರದೃಷ್ಟವನ್ನು ಹಳಿದುಕೊಳ್ಳುತ್ತಿದ್ದಾನೆ.