ಮದುವೆ ಡ್ರೆಸ್​ ಬದಲು ಮೈತುಂಬಾ ಬ್ಯಾಂಡೇಜ್​ ಹಾಕ್ಕೊಂಡು ಬಂದ ಮದುಮಗ- ವಧು ನೀಡಿದಳು ಸಮಜಾಯಿಷಿ

madumaga
Published on

ಜಕಾರ್ತಾ: ಮದುವೆ ಹತ್ತಿರ ಬಂತು ಎಂದರೆ ಮದುಮಕ್ಕಳು ಮೊದಲು ಹೋಗುವುದು ಡ್ರೆಸ್​ ಖರೀದಿಗೆ. ಮದುವೆಯಲ್ಲಿ ಡ್ರೆಸ್​ ಹಾಗೂ ಆಭರಣಗಳದ್ದೇ ಕಾರುಬಾರು.

ಆದರೆ ಇಲ್ಲೊಬ್ಬ ವರ, ಮದುವೆಗೆ ಅರ್ಧಂಬರ್ಧ ಡ್ರೆಸ್​ ಹಾಕಿಕೊಂಡು ಬಂದು ಇಡೀ ವಿಶ್ವದ ತುಂಬ ವೈರಲ್​ ಆಗಿದ್ದಾನೆ. ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆದ ಈ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿದೆ.

ಅಷ್ಟಕ್ಕೂ ಈ ಮದುಮಗನೇನು ಪಾಪ ಬೇಕಂತಲೇ ಅರ್ಧಂಬರ್ಧ ಡ್ರೆಸ್​ ಹಾಕಿಕೊಂಡು ಬಂದಿಲ್ಲ. ಬದಲಿಗೆ ಈ ಫೋಟೋ ನೋಡಿದರೆ ನಿಮಗೇ ತಿಳಿಯುತ್ತದೆ. ಮೈತುಂಬಾ ಬ್ಯಾಂಡೇಜ್​ ಹಾಕಿಕೊಂಡು ಬಂದಿರುವ ಈ ಮದುಮಗನನ್ನು ನೋಡಿದರೆ ಎಲ್ಲಿಯೋ ಅಪಘಾತ ಮಾಡಿಕೊಂಡು ಬಂದಿರುವುದು ತಿಳಿಯುತ್ತದೆ.

Image

ಅಂದಹಾಗೆ ಇದನ್ನು ವಧುವೇ ಖುದ್ದಾಗಿ ತನ್ನ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾಳೆ. ಯಾರೂ ಏನೂ ಪ್ರಶ್ನೆ ಮಾಡಬಾರದು ಎನ್ನುವ ಕಾರಣಕ್ಕೆ ಆಕೆಯೇ ಇದಕ್ಕೆ ಸಮಜಾಯಿಷಿಯನ್ನೂ ನೀಡಿದ್ದಾಳೆ. ಅದೇನೆಂದರೆ, ನನ್ನ ಪತಿ ಪೆಟ್ರೋಲ್ ತರಲು ಹೋಗಿದ್ದು ದಾರಿಯಲ್ಲಿ ಬರುವಾಗ ಇದ್ದಕ್ಕಿದಂತೆ ಪ್ರಜ್ಞೆ ತಪ್ಪಿ ಮೋಟಾರ್ ಸೈಕಲ್‍ನಿಂದ ಕೆಳಗೆ ಬಿದ್ದಿದ್ದಾರೆ. ಇದರಿಂದ ಭುಜದ ಶಸ್ತ್ರ ಚಿಕಿತ್ಸೆಗೆ ಒಳಗಾದರು. ಅಲ್ಲದೆ ಹಲವು ಕಡೆ ಗಾಯಗೊಂಡಿದ್ದಾರೆ. ಹೀಗಾಗಿ ಮದುವೆಯ ಸಮಯದಲ್ಲಿ ಅವರು ಉಡುಪನ್ನು ಧರಿಸಲು ಆಗಲಿಲ್ಲ ಎಂದು ತಿಳಿಸಿದ್ದಾಳೆ.

ಕಾರಣ ಏನೇ ಇರಲಿ, ಈ ಫೋಟೋ ಅಂತೂ ಇದಾಗಲೇ ಮೂರು ಸಾವಿರಕ್ಕೂ ಅಧಿಕ ಬಾರಿ ರೀಟ್ವೀಟ್​ ಆಗಿದ್ದು, ಜನರು ಮದುಮಗನನ್ನು ಕೊಂಡಾಡುತ್ತಿದ್ದಾರೆ. ಇಷ್ಟೆಲ್ಲಾ ಏಟಾದರೂ ಮದುವೆಯನ್ನು ಮುಹೂರ್ತದಲ್ಲಿಯೇ ಮಾಡಿಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net