

ಪಟ್ನಾ: ನಾವು ಇಂಜಿನಿಯರಿಂಗ್ ಅಧ್ಯಯನ ಮಾಡುತ್ತಿದ್ದಾಗ ಕಾಲೇಜಿನಲ್ಲಿ ಒಬ್ಬರೇ ಒಬ್ಬರು ಹುಡುಗಿಯರು ಇರಲಿಲ್ಲ. ಹುಡುಗಿಯರಿಲ್ಲದ ಕಾಲೇಜು ನೋಡಲು ಕೆಟ್ಟದಾಗಿರುತ್ತಿತ್ತು ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದರು.
ಪಾಟ್ನಾದಲ್ಲಿ ಹೊಸದಾಗಿ ನಿರ್ಮಿಸಲಾದ ಬಾಲಕಿಯರ ಹಾಸ್ಟೆಲ್ ಉದ್ಘಾಟನೆ ವೇಳೆ ಅವರು ಮಾತನಾಡುತ್ತಿದ್ದರು. ಆಗೆಲ್ಲಾ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜು ಎಂದರೆ ಬರೇ ಹುಡುಗರೇ ಇರೋರು. ಹುಡುಗಿಯರೇ ಕಾಲೇಜಿನಲ್ಲಿ ಇರುತ್ತಿರಲಿಲ್ಲ. ಅದಕ್ಕಾಗಿ ತುಂಬಾ ಬೋರ್ ಆಗುತ್ತಿತ್ತು. ಆದರೆ ಈಗಿನ ಪರಿಸ್ಥಿತಿ ಬದಲಾಗಿದೆ. ಎಷ್ಟೊಂದು ಹುಡುಗಿಯರು ಇಂದು ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಓದುತ್ತಿದ್ದಾರೆ ಎಂದು ಹೇಳಿದರು. ಹೆಚ್ಚು ಹೆಚ್ಚು ಹುಡುಗಿಯರು ಉನ್ನತ ವ್ಯಾಸಂಗ ಮಾಡುತ್ತಿರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ, ವರದಕ್ಷಿಣೆ ಸಮಸ್ಯೆ ಕುರಿತು ಅವರು ಮಾತನಾಡಿದರು. ಇದೊಂದು ದೊಡ್ಡ ಸಮಸ್ಯೆಯಾಗಿದ್ದು, ಹೆಣ್ಣುಮಕ್ಕಳ ಬಾಳು ಹಾಳಾಗುತ್ತಿದೆ ಎಂದು ವಿಷಾದಿಸಿದರು. ವರದಕ್ಷಿಣೆ ತೆಗೆದುಕೊಳ್ಳುವುದು ಅತ್ಯಂತ ನಿಷ್ಪ್ರಯೋಜಕ ನಡೆ. ಇಂಥ ಪದ್ಧತಿ ಹೋಗಬೇಕಿದೆ ಎಂದ ಅವರು, ಮದುವೆಯ ವಿಶೇಷತೆಯನ್ನು ಹೇಳಿದರು. ನೋಡಿ ಹೆಣ್ಣು-ಗಂಡು ಮದುವೆಯಾದರಷ್ಟೇ ಮಕ್ಕಳು ಹುಟ್ಟುವುದು, ಹೀಗೆ ವರದಕ್ಷಿಣೆ ಎಂದು ಹೋದರೆ ಹೆಣ್ಣುಮಕ್ಕಳು ಮದುವೆಗೆ ಹಿಂದೇಟು ಹಾಕುತ್ತಾರೆ. ಮುಂದೆ ಗಂಡು-ಗಂಡು ಮಕ್ಕಳೇ ಮದುವೆಯಾಗಬೇಕಾಗುತ್ತದೆ. ಇಬ್ಬರು ಪುರುಷರು ಮದ್ವೆಯಾದರೆ ಮಕ್ಕಳು ಹುಟ್ಟುತ್ತಾರಾ? ಯೋಚನೆ ಮಾಡಿ, ಸುಮ್ಮನೆ ವರದಕ್ಷಿಣೆ ಹಿಂದೆ ಬಿದ್ದು ಜೀವನ ವ್ಯರ್ಥ ಮಾಡಿಕೊಳ್ಳಬೇಡಿ ಎಂದು ಬುದ್ಧಿಮಾತು ಹೇಳಿದರು.