

ರಂಗಾರೆಡ್ಡಿ (ತೆಲಂಗಾಣ) : ತಾಯಿ ತೀರಿಕೊಂಡ ಮೇಲೆ ಕುಡುಕನಾದ ಅಪ್ಪ ದಿನನಿತ್ಯವೂ ನೀಡುತ್ತಿರುವ ಕಿರುಕುಳವನ್ನು ಸಹಿಸಲಾಗದೇ ಎಸ್ಎಸ್ಎಲ್ಸಿ ಓದುತ್ತಿರುವ ಬಾಲಕಿ ಮನಿಷಾ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ನಂದಿಗಾಮ ವಲಯದ ಬುಗ್ಗೊನಿಗುಡ ಗ್ರಾಮದಲ್ಲಿ ನಡೆದಿದೆ.
"ನಾನು ನನ್ನ ತಂದೆಯನ್ನು ದ್ವೇಷಿಸುತ್ತೇನೆ. ನಾನು ಅವನನ್ನು ಕೊಲ್ಲಬೇಕು, ಆದರೆ ಅದು ಸಾಧ್ಯವಿಲ್ಲ, ಅದಕ್ಕಾಗಿ ನಾನು ಸಾಯುತ್ತಿದ್ದೇನೆ. ನಮ್ಮ ತಂದೆ ಒಬ್ಬ ಮೂರ್ಖ, ಪ್ರತಿದಿನ ಮದ್ಯ ಸೇವಿಸುತ್ತಾನೆ. ಅವನ ಕಿರುಕುಳದಿಂದ ಬೇಸತ್ತು ಹೋಗಿದ್ದೇನೆ. ಅಮ್ಮ ಬದುಕಿದ್ದಾಗ ಆತ ತುಂಬಾ ಒಳ್ಳೆಯವನಾಗಿದ್ದ. ಆದರೆ ಅಮ್ಮ ಸತ್ತ ಮೇಲೆ ಕುಡುಕನಾದ. ಅವನನ್ನು ಅಪ್ಪಾ ಎಂದು ಕರೆಯಲು ಹೇಸಿಗೆಯಾಗುತ್ತದೆ ಎಂದು ಬಾಲಕಿ ಡೆತ್ನೋಟ್ನಲ್ಲಿ ಬರೆದಿದ್ದಾಳೆ.
"ನಾನು ಮೂರು ಬಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದೆ. ಆದರೆ, ಬದುಕುಳಿದಿದ್ದೇನೆ. ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ನಾನು ಸತ್ತಿರುವುದು ಎಲ್ಲರಿಗೂ ತಿಳಿಯುತ್ತದೆ. ನನ್ನ ಸಾವಿಗೆ ಕಾಯುತ್ತಿದ್ದೇನೆ ಎಂದು ಮನಿಷಾ ಬರೆದಿದ್ದಾಳೆ.
ಈಕೆಯ ತಾಯಿ ಕಳೆದ ವರ್ಷ ಮೃತಪಟ್ಟಿದ್ದರು. ಅವರು ಮೃತಪಟ್ಟ ಬಳಿಕ ನರಸಿಂಹುಲು ಕುಡಿತದ ಚಟಕ್ಕೆ ಬಿದ್ದು ಪ್ರತಿದಿನವೂ ಮಕ್ಕಳ ಜತೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.