

ನವದೆಹಲಿ: ಕರೊನಾ ಬಿಕ್ಕಟ್ಟನ್ನು ನಿಭಾಯಿಸಲು ಕೇಂದ್ರ ಸರ್ಕಾರದಿಂದ ಎಂಟು ಅಂಶಗಳ ಆರ್ಥಿಕ ಪರಿಹಾರವನ್ನು ಘೋಷಣೆ ಮಾಡಲಾಗಿದೆ. ಈ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿವರಣೆ ನೀಡಿದರು.
‘ಎಂಟು ಆರ್ಥಿಕ ಪರಿಹಾರ ಕ್ರಮಗಳನ್ನ ಘೋಷಿಸುತ್ತಿದ್ದೇವೆ. ಅವುಗಳಲ್ಲಿ ನಾಲ್ಕು ಸಂಪೂರ್ಣವಾಗಿ ಹೊಸದಾಗಿವೆ ಮತ್ತು ಆರೋಗ್ಯ ಮೂಲಸೌಕರ್ಯಕ್ಕೆ ನಿರ್ದಿಷ್ಟವಾಗಿದೆ ಎಂದ ಅವರು ಕೋವಿಡ್ ಬಾಧಿತ ವಲಯಗಳಿಗೆ 1.1 ಲಕ್ಷ ಕೋಟಿ ರೂ. ಮತ್ತು ಆರೋಗ್ಯ ವಲಯಕ್ಕೆ 50,000 ಕೋಟಿ ರೂ. ಮೌಲ್ಯದ ಸಾಲ ಖಾತರಿ ಯೋಜನೆ, ಇತರ ವಲಯಗಳಿಗೆ 60 ಸಾವಿರ ಕೋಟಿ ರೂ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಸಾಲ ಖಾತರಿ ಯೋಜನೆಯಡಿ 25 ಲಕ್ಷ ಜನರಿಗೆ ಸೌಲಭ್ಯ ಒದಗಿಸಬೇಕಿದೆ. ಅತಿ ಸಣ್ಣ ಸಾಲಗಾರರಿಗೆ ಮೈಕ್ರೋಫೈನಾನ್ಸ್ ಸಂಸ್ಥೆಗಳು ಸಾಲ ನೀಡಬೇಕು. ಸಾಲ ನೀಡಲು ಗರಿಷ್ಠ 1.25 ಲಕ್ಷ ರೂ. ಹೊಸ ಸಾಲ ನೀಡುವಿಕೆಯ ಮೇಲೆ ಗಮನ ಕೇಂದ್ರೀಕರಿಸಲಾಗಿದೆ ಎಂದರು.
ಹೊಸ ಸಾಲ ಖಾತರಿ ಯೋಜನೆಯಡಿ ಬಡ್ಡಿ ದರವು ಆರ್‌ಬಿಐ ನಿಗದಿತ ದರಕ್ಕಿಂತ ಶೇಕಡಾ 2 ರಷ್ಟು ಕಡಿಮೆಯಾಗಿದ್ದು, 3 ವರ್ಷಗಳ ಸಾಲದ ಅವಧಿ ಇದೆ. ಹೊಸ ಸಾಲಗಳ ಮೇಲೆ ಗಮನ ಕೇಂದ್ರೀಕರಿಸಿ, ಎನ್‌ಪಿಎಗಳನ್ನು ಹೊರತುಪಡಿಸಿ ಒತ್ತಡಕ್ಕೊಳಗಾದ ಸಾಲಗಾರರನ್ನು ಒಳಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರವಾಸೋದ್ಯಮದ ಕುರಿತು ಘೋಷಿಸಿದ ಸಚಿವೆ, 11 ಸಾವಿರ ನೋಂದಾಯಿತ ಟೂರಿಸ್ಟ್ ಗೈಡ್‌ಗಳಿಗೆ ಸಾಲದ ನೆರವು ನೀಡಲಾಗುವುದು. ರಾಜ್ಯ ಮಟ್ಟದಲ್ಲಿ ನೋಂದಾಯಿತ ಗೈಡ್‌ಗಳಿಗೆ ಸಾಲ ನೀಡಲಾಗುವುದು. ಟೂರಿಸ್ಟ್ ಏಜೆನ್ಸಿಗಳಿಗೆ 10 ಲಕ್ಷ ರೂ.ವರೆಗೆಸಾಲ ನೀಡಲಾಗುವುದು. ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಯೋಜನೆ ಜಾರಿ ಮಾಡಲಾಗಿದ್ದು, 25 ಲಕ್ಷ ಜನರಿಗೆ ಮೈಕ್ರೋ ಫೈನಾನ್ಸ್ ಮೂಲಕ ನೆರವು ನೀಡಲಾಗುವುದು. ಬ್ಯಾಂಕ್‌ಯೇತರ ಹಣಕಾಸು ಸಂಸ್ಥೆ ಮೂಲಕ 2ರ ಬಡ್ಡಿದರದಲ್ಲಿ ತಲಾ 1.25 ಲಕ್ಷ ಸಾಲ ನೀಡಲಾಗುವುದು, ಮೂರು ವರ್ಷದೊಳಗೆ ಸಾಲ ಮರುಪಾವತಿಸಲು ಅವಕಾಶ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಈ ಎಂಟು ಯೋಜನೆಗಳನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ ಹೀಗಿದೆ:
1) ಆರೋಗ್ಯ ವಲಯಕ್ಕೆ 50 ಸಾವಿರ ಕೋಟಿ ರೂ. ಇತರ ವಲಯಗಳಿಗೆ 60 ಸಾವಿರ ಕೋಟಿ ರೂ.
2) ಮೈಕ್ರೋಫೈನಾನ್ಸ್ ಮೂಲಕ 25 ಲಕ್ಷ ಮಂದಿಗೆ ಒದಗಿಸುವ ವ್ಯಕ್ತಿಗಳಿಗೆ ಕ್ರೆಡಿಟ್ ಗ್ಯಾರಂಟಿ ಯೋಜನೆ ಮೂಲಕ ಸಾಲ ಒದಗಿಸಲಾಗುತ್ತದೆ.
3) 1.5 ಲಕ್ಷ ಕೋಟಿ ರೂ. ಹೆಚ್ಚುವರಿ ಮೊತ್ತ ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರೆಂಟಿ ಸ್ಕೀಮ್
4) 5 ಲಕ್ಷ ಮಂದಿಗೆ ಉಚಿತ ವೀಸಾ ನೀಡುವ ಯೋಜನೆ.
5) ಆತ್ಮನಿರ್ಭರ್ ಭಾರತ್ ರೋಜ್ಗಾರ್ ಯೋಜನಾ ವಿಸ್ತರಣೆ
6) 11 ಸಾವಿರಕ್ಕೂ ಹೆಚ್ಚಿನ ನೋಂದಾಯಿತ ಪ್ರವಾಸಿ ಗೈಡ್ಗಳು/ಟ್ರಾವೆಲ್ ಮತ್ತು ಇತರ ಪ್ರವಾಸೋದ್ಯಮ ವಲಯದಲ್ಲಿ ತೊಡಗಿಕೊಂಡವರಿಗೆ ಒದಗಿಸಲಾಗುತ್ತದೆ.
7) ಡಿಎಪಿ ಮತ್ತು ಪಿ ಆ್ಯಂಡ್ ಕೆ ಗೊಬ್ಬರದ ಮೇಲೆ ಹೆಚ್ಚುವರಿ ಸಬ್ಸಿಡಿ (ಈ ಹಿಂದೆ ಇದ್ದಂತೆ)
8) ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ವಿಸ್ತರಣೆ (PMGKAY) (ಈ ಹಿಂದೆ ಇದ್ದಂತೆ)