

ಕರಾಚಿ: ಟಿಕ್ಟಾಕ್ನಿಂದ ಪ್ರಸಿದ್ಧಿಗೆ ಬಂದವರು ಕೆಲವರು, ತಮ್ಮ ಪ್ರತಿಭೆಯನ್ನು ತೋರಿಸಲು ಇದನ್ನು ವೇದಿಕೆ ಮಾಡಿಕೊಂಡವರು ಹಲವರು. ಆದರೆ ಟಿಕ್ಟಾಕ್ ವ್ಯಾಮೋಹಕ್ಕೆ ಒಳಗಾಗಿ ಹೇಗೇಗೋ ವಿಡಿಯೋ ಮಾಡಲು ಹೋಗಿ ಮೃತಪಟ್ಟವರೂ ಅನೇಕರು.
ಚೀನಾದ ಈ ಆ್ಯಪ್ ಸದ್ಯ ಭಾರತದಲ್ಲಿ ಇದು ಬ್ಯಾನ್ ಆಗಿದೆಯೆನ್ನಿ. ಆದರೆ ಪಾಕಿಸ್ತಾನದಲ್ಲಿ ಇದನ್ನು ಬಳಸಲು ಅವಕಾಶವಿದೆ. ಆದರೆ ಟಿಕ್ಟಾಕ್ ಪ್ರೀತಿ ಆರು ಮಂದಿ ಗೃಹಿಣಿಯರ ಜೀವ ಪಡೆದಿದೆ, ಅದೂ ಅವರ ಗಂಡಂದಿರಿಂದಲೇ ಕೊಲೆಯಾಗಿರುವ ಭೀಕರ ಘಟನೆ ಕರಾಚಿಯಲ್ಲಿ ನಡೆದಿದೆ.
ಕಳೆದೆರಡು ತಿಂಗಳಿನಲ್ಲಿ ಆರು ಮಂದಿ ಟಿಕ್ಟಾಕ್ನಿಂದಾಗಿ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಇದೀಗ ಇಶಾಕ್ ಎಂಬಾತ ತನ್ನ ಪತ್ನಿಯ ಜತೆಗೆ ಆಕೆಯ ತಾಯಿಯನ್ನೂ ಕೊಲೆ ಮಾಡಿ ಸಿಕ್ಕಿಬಿದ್ದಿದ್ದಾನೆ. ಈ ಪ್ರಕರಣದಲ್ಲಿ ಇಶಾನ್ನ ಪತ್ನಿಗೆ ಟಿಕ್ಟಾಕ್ ಹುಚ್ಚು ಇದ್ದುದು ಒಂದೆಡೆಯಾದರೆ, ಆಕೆ ಫೋನ್ನಲ್ಲಿ ಸದಾ ಹರಟುತ್ತಿದ್ದಳು. ಇದನ್ನು ಇಶಾಕ್ ಸಹಿಸುತ್ತಿರಲಿಲ್ಲ. ಇಬ್ಬರ ನಡುವೆ ಇದೇ ಕಾರಣಕ್ಕೆ ಹಲವಾರು ಬಾರಿ ಗಲಾಟೆಯಾಗಿತ್ತು. ಗಂಡನ ಕಿರಿಕಿರಿಗೆ ಬೇಸತ್ತ ಪತ್ನಿ ತವರಿಗೆ ಹೋಗಿದ್ದಳು. ಅಲ್ಲಿಯೂ ಬಿಡದ ಇಶಾಕ್ ಪತ್ನಿಯನ್ನೂ ಸೇರಿದಂತೆ ಆಕೆಯ ತಾಯಿಗೂ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಕಳೆದ ಎರಡು ತಿಂಗಳಿನಿಲ್ಲಿ ಇದು ಐದನೆಯ ಪ್ರಕರಣವಾಗಿದ್ದು, ಹಿಂದೆ ನಡೆದಿರುವ ಪ್ರಕರಣಗಳಲ್ಲಿಯೂ ತಮ್ಮ ಪತ್ನಿಯನ್ನು ಗಂಡಂದಿರು ಟಿಕ್ಟಾಕ್ ವಿಷಯವಾಗಿಯೇ ಗುಂಡಿಟ್ಟು ಕೊಲೆ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ.