ಫೇಷಿಯಲ್​ ಮಾಡಿಸಬೇಕಿತ್ತು ಎನ್ನುತ್ತಲೇ ಬ್ಯೂಟಿ ಪಾರ್ಲರ್​ ಮಾಲೀಕಳನ್ನು ತಬ್ಬಿಕೊಂಡು ಪರಾರಿ!

beauty
Published on

ಗಾಂಧಿನಗರ: ಇಲ್ಲಿಯ ಬ್ಯೂಟಿ ಪಾರ್ಲರ್​ ಒಂದರಲ್ಲಿ ಮಾಸ್ಕ್​ ಧರಿಸಿ ಚೂಡಿದಾರ ಹಾಕಿದವಳೊಬ್ಬಳು ಬಂದು ನಿಂತಳು. ಅವಳನ್ನು ನೋಡಿದ ಬ್ಯೂಟಿ ಪಾರ್ಲರ್​ ಮಾಲೀಕಳು ಏನು ಬೇಕು ಎಂದು ವಿಚಾರಿಸಿದಾಗ, ಮಾಸ್ಕ್​ ಹಾಕಿ ಬಂದಾಕೆ ಐಬ್ರೋ ತೋರಿಸಿದ್ದಾಳೆ.

ಸರಿ ಐಬ್ರೋ ಮಾಡಿಸಲು ಬಂದಿದ್ದಾಳೆ ಎಂದು ಈಕೆ ಕುಳಿತುಕೊಳ್ಳಲು ಹೇಳಿದ್ದಾಳೆ. ಅಲ್ಲಿಂದ ಮೊದಲು ಬಂದವರೆಲ್ಲಾ ಹೋದ ಮೇಲೆ ಮಾಲೀಕಳು ಮಾಸ್ಕ್​ ಹಾಕಿ ಬಂದಾಕೆಯ ಐಬ್ರೋ ಮಾಡಲು ಕುಳಿತುಕೊಳ್ಳುವಂತೆ ಹೇಳಿದ್ದಾಳೆ.

ಅಷ್ಟರಲ್ಲಿಯೇ ಬಂದಾಕೆ, ನನಗೆ ಫೇಷಿಯಲ್​ ಕೂಡ ಮಾಡಿಸಬೇಕಿತ್ತು, ಮಾಡಿಸುವಿರಾ ಎಂದಿದ್ದಾಳೆ. ಆ ಧ್ವನಿ ಮಹಿಳೆಯದ್ದು ಅಲ್ಲ ಬದಲಿಗೆ ಪುರುಷರದ್ದು ಎಂದು ಮಾಲೀಕಳಿಗೆ ತಿಳಿದಿದೆ. ಮಾಸ್ಕ್​ ತೆಗೆಯುವಂತೆ ಸೂಚಿಸಿದ್ದಾಳೆ. ಅಷ್ಟರಲ್ಲಿಯೇ ಚೂಡಿದಾರಲ್ಲಿ ಬಂದವ ಮಾಸ್ಕ್​ ತೆಗೆದಿದ್ದಾನೆ. ಅಲ್ಲಿಗೆ ಬಂದದ್ದು ಮಹಿಳೆಯಲ್ಲ, ಬದಲಿಗೆ ಪುರುಷ ಎಂದು ತಿಳಿಯುತ್ತಲೇ ಮಾಲೀಕಳು ಹೊರಗೆ ಹೋಗುವಂತೆ ಗದರಿದ್ದಾಳೆ.

ಅಷ್ಟರಲ್ಲಿಯೇ ಬಂದಾತ ಆಕೆಯನ್ನು ಹತ್ತಿರಕ್ಕೆ ಸೆಳೆದುಕೊಂಡು ಇನ್ನಿಲ್ಲದ ಕಿರುಕುಳ ನೀಡಿದ್ದಾನೆ. ಸಂತ್ರಸ್ತೆ ಜೋರಾಗಿ ಕೂಗಿಕೊಂಡಾಗ ಅಕ್ಕಪಕ್ಕದವರು ಆಗಮಿಸುತ್ತಿದ್ದಂತೆಯೇ ಬಂದವ ಅಲ್ಲಿಂದ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾನೆ.

ಗಂಡನನ್ನು ಕಳೆದುಕೊಂಡು 12 ವರ್ಷದ ಮಗನೊಂದಿಗೆ ವಾಸಿಸುತ್ತಿರುವ ಸಂತ್ರಸ್ತೆ ಬ್ಯೂಟಿ ಪಾರ್ಲರ್​ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾಳೆ. ಆಕೆ ಒಬ್ಬಂಟಿ ಎಂದು ತಿಳಿದದ್ದರಿಂದ ಈ ವ್ಯಕ್ತಿ ಚೂಡಿದಾರ್​ ಹಾಕಿಕೊಂಡು ಮಾಸ್ಕ್​ ಧರಿಸಿ ಹೆಣ್ಣುಮಕ್ಕಳಂತೆ ಒಳಗೆ ಬಂದು ಈ ಕೃತ್ಯ ಎಸಗಿದ್ದಾನೆ.

ಮಹಿಳೆ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾಳೆ. ಅಕ್ಕಪಕ್ಕದ ಸಿಸಿಟಿವಿ ದೃಶ್ಯವನ್ನು ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net