

ಪ್ರತಾಪಗಢ (ಉತ್ತರ ಪ್ರದೇಶ): ಹುಟ್ಟುಹಬ್ಬ ಸೇರಿದಂತೆ ಕೆಲವು ಶುಭ ಕಾರ್ಯಕ್ರಮಗಳಲ್ಲಿ ಈಗ ಹೊಸದೊಂದು ಟ್ರೆಂಡ್ ಶುರುವಾಗಿದೆ. ಅದೇನೆಂದರೆ ಖುಷಿಯನ್ನು ಹಂಚಿಕೊಳ್ಳಲು ಗಾಳಿಯಲ್ಲಿ ಗುಂಡುಹಾರಿಸುವುದು. ರಾಜಕಾರಣಿಗಳ ಮಕ್ಕಳು, ಕೆಲವು ಸೆಲೆಬ್ರಿಟಿಗಳು ಸೇರಿದಂತೆ ದುಡ್ಡು ಹೆಚ್ಚಿದ್ದವರೆಲ್ಲರೂ ಮೋಜಿಗಾಗಿ ಮಾಡುವ ಟ್ರೆಂಡ್ ಇದಾಗಿದೆ.
ಇದೇ ರೀತಿ ಇಲ್ಲೊಬ್ಬ ಮದುಮಗಳು ಮದುಮಗ ಕೊರಳಿಗೆ ಹಾರ ಹಾಕುತ್ತಿದ್ದಂತೆಯೇ ಖುಷಿಯಿಂದ ಕೈಯನ್ನು ಮೇಲಕ್ಕೆತ್ತಿ ಗುಂಡು ಹಾರಿಸಿದ್ದಾಳೆ. ಇಂಥದ್ದೊಂದು ವಿಚಿತ್ರ ಘಟನೆ ನಡೆದಿರುವುದು ಉತ್ತರ ಪ್ರದೇಶದ ಪ್ರತಾಪಗಢದಲ್ಲಿ.
ರೂಪಾ ಎಂಬಾಕೆಯ ಮದುವೆ ನಡೆಯುತ್ತಿತ್ತು. ಅವಳು ಮೊದಲೇ ಈ ರೀತಿ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದಳು. ತನ್ನ ಮದುವೆಯನ್ನು ಭಿನ್ನವಾಗಿ ಆಚರಿಸಬೇಕು ಎಂದುಕೊಂಡಿದ್ದ ಇವಳು ಮದುವೆಯ ವೇಳೆ ಗುಂಡು ಹಾರಿಸಿದ್ದಾಳೆ. ಅಷ್ಟರಲ್ಲಿ ಅಲ್ಲಿ ಹರ್ಷೋದ್ಗಾರ ಕೇಳಿಬಂದಿದೆ. ಇದರ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ವೈರಲ್ ವಿಡಿಯೋ ನೋಡಿದ ಜನರು ರೊಚ್ಚಿಗೆದ್ದಿದ್ದು, ಈ ಸಂಬಂಧ ಮದುಮಗಳ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಮದುವೆಯಾಗಿ ಮುಂದಿನ ಕಾರ್ಯಕ್ಕೆ ಸಜ್ಜಾಗಿದ್ದ ಮದುಮಗಳ ಮನೆಯ ಬಾಗಿಲಿಗೆ ಪೊಲೀಸರು ಹೋಗಿದ್ದು, ಆಕೆಯನ್ನು ವಿಚಾರಣೆ ಮಾಡಿದ್ದಾರೆ. ತನ್ನ ಸಂಬಂಧಿ ರಾಮವಾಸ್ ಪಾಂಡೆ ಎಂಬುವವರ ಪರವಾನಗಿ ಪಡೆದ ಬಂದೂಕಿನಿಂದ ಗುಂಡನ್ನು ಹಾರಿಸಿದ್ದು, ಇದು ಕೇವಲ ಸಂತೋಷಕ್ಕಾಗಿ ಎಂದಿದ್ದಾಳೆ ಆಕೆ.
ಆದರೆ ನಿಯಮದ ಪ್ರಕಾರ ಈ ರೀತಿ ಮಾಡುವುದು ಕಾನೂನುಬಾಹಿರ ಎಂದಿರುವ ಪೊಲೀಸರು ರೂಪಾ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾರೆ. ಮದುವೆಯ ಖುಷಿಯಲ್ಲಿ ತೇಲಾಡುತ್ತಿದ್ದ ದಂಪತಿ ಈಗ ಪೊಲೀಸ್ ಠಾಣೆ ಅಲೆಯುವಂತಾಗಿದೆ.