ಮರಾಠಿಗರಿಗೆ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ: ಕಾಯ್ದೆಗೆ 'ಸುಪ್ರೀಂ' ತಡೆ

reservation
Published on

ನವದೆಹಲಿ: ಉದ್ಯೋಗ ಮತ್ತು ಶಿಕ್ಷಣದಲ್ಲಿ ಮರಾಠಿಗರಿಗೆ ಮೀಸಲಾತಿ ನೀಡುವ ಸಂಬಂಧ ಮಹಾರಾಷ್ಟ್ರ ಸರ್ಕಾರ 2018ರಲ್ಲಿ ಜಾರಿಗೆ ತಂದಿದ್ದ ಕಾಯ್ದೆಗೆ ಸುಪ್ರೀಂಕೋರ್ಟ್‌ ಬುಧವಾರ ತಡೆ ನೀಡಿದೆ.

ಈ ವರ್ಷ ಮಹಾರಾಷ್ಟ್ರದಲ್ಲಿ ಉದ್ಯೋಗ ಶಿಕ್ಷಣಕ್ಕೆ ಮರಾಠ ಮೀಸಲಾತಿ ಅನ್ವಯಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಈಗಾಗಲೇ ಈ ಕಾಯ್ದೆಯಿಂದ ಪ್ರಯೋಜನ ಪಡೆದವರಿಗೆ ಯಾವುದೇ ತೊಂದರೆ ಎದುರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

2020-21ರಲ್ಲಿ ಉದ್ಯೋಗ ಹಾಗೂ ಶೈಕ್ಷಣಿಕವಾಗಿ ಮರಾಠ ಮೀಸಲಾತಿ ಲಭ್ಯವಿರುವುದಿಲ್ಲ, ಸ್ನಾತಕೋತ್ತರ ಪದವಿ ಕೋಸ್​ರ್ಗಳ ದಾಖಲಾತಿಯಲ್ಲಿ ಯಥಾಸ್ಥಿತಿ ಇರಲಿದೆ, ಯಾವುದೇ ಬದಲಾವಣೆ ಇಲ್ಲ ಎಂದು ನ್ಯಾಯಮೂರ್ತಿ ಎಲ್.ಎನ್ ರಾವ್ ನೇತೃತ್ವದ ತ್ರಿಸದ್ಯಪೀಠ ಹೇಳಿದೆ.

2018ರ ಕಾಯ್ದೆ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ಮಹಾರಾಷ್ಟ್ರದ ಕಾಯ್ದೆಯು ಮರಾಠಿಗರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಕ್ರಮವಾಗಿ ಶೇ.12 ಮತ್ತು 13ರಷ್ಟು ಮೀಸಲಾತಿ ಕಲ್ಪಿಸಲಿದೆ. ಇದು, ಮೀಸಲಾತಿಯ ಒಟ್ಟು ಪ್ರಮಾಣ ಶೇ 50 ಮೀರಬಾರದು ಎಂಬ ಸುಪ್ರೀಂಕೋರ್ಟ್‌ ಆದೇಶದ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ದೂರಿದ್ದರು.

ಇದೇ ವೇಳೆ ಮರಾಠರಿಗೆ ಮೀಸಲಾತಿಯನ್ನು ನೀಡುವ ಮಹಾರಾಷ್ಟ್ರ ಕಾನೂನನ್ನು ಪ್ರಶ್ನಿಸಿರುವ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಿಶಾಲ ಪೀಠಕ್ಕೆ ವರ್ಗಾವಣೆ ಮಾಡಿದೆ.

ಈ ಕಾಯ್ದೆಯಲ್ಲಿ ಶೇ.16ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಈ ಮೊದಲು ಹೈಕೋರ್ಟ್​ಗೆ ಹೋಗಿದ್ದರು. ಅಲ್ಲಿ ಶೇ.16ರಿಂದ ಮೀಸಲಾತಿಯನ್ನು ಶಿಕ್ಷಣ ಮತ್ತು ಉದ್ಯೋಗದಲ್ಲಿ ಕ್ರಮವಾಗಿ ಶೇ.12 ಮತ್ತು 13ರಷ್ಟು ಮೀಸಲಾತಿ ಕಲ್ಪಿಸುವಂತೆ ಆದೇಶಿಸಲಾಗಿತ್ತು. ಇದನ್ನು ಪ್ರಶ್ನಿಸಿ ಇದೀಗ ಅರ್ಜಿದಾರರು ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net