ಅಮೆರಿಕದ 400 ಸಿರಿವಂತರ ಪಟ್ಟಿಯಲ್ಲಿ, ಭಾರತೀಯ ಮೂಲದವರೆಷ್ಟು, ಅವರ ಆಸ್ತಿಯೆಷ್ಟು ಗೊತ್ತಾ?

forbes
Published on

ನವದೆಹಲಿ: ಅಮೆರಿಕದ 400 ಮಂದಿ ಅತ್ಯಂತ ಸಿರಿವಂತರ ಪಟ್ಟಿಯನ್ನು ಫೋರ್ಬ್ಸ್​ ಇಂದು ಬಿಡುಗಡೆ ಮಾಡಿದ್ದು, ಇವರಲ್ಲಿ ಏಳು ಮಂದಿ ಭಾರತದ ಮೂಲದವರು ಇದ್ದಾರೆ.

ಅವರೆಂದರೆ: ಸೈಬರ್ ಸೆಕ್ಯುರಿಟಿ ಉದ್ಯಮವಾದ ಜೆಡ್​ಸ್ಕೇಲರ್​ ಸಿಇಒ ಝೇ ಚೌಧರಿ, ಸಿಂಫನಿ ಟೆಕ್ನಾಲಜಿ ಗ್ರೂಪ್‌ನ ಸ್ಥಾಪಕ ಮತ್ತು ಅಧ್ಯಕ್ಷ ರೋಮೇಶ್ ವಾಧ್ವಾನಿ, ಆನ್‌ಲೈನ್ ಗೃಹ ಸರಕುಗಳ ಚಿಲ್ಲರೆ ವ್ಯಾಪಾರಿ ವೆಫೇರ್ ನೀರಜ್​ ಷಾ, ಸಿಲಿಕಾನ್ ವ್ಯಾಲಿ ಸಾಹಸೋದ್ಯಮ ಬಂಡವಾಳ ಸಂಸ್ಥೆ ಖೋಸ್ಲಾ ವೆಂಚರ್ಸ್​ನ ಸಂಸ್ಥಾಪಕ ವಿನೋದ್ ಖೋಸ್ಲಾ, ವ್ಯವಸ್ಥಾಪಕ ಪಾಲುದಾರ ಶೇರ್ಪಾಲೋ, ವೆಂಚರ್ಸ್ ಕವಿಟಾರ್ಕ್ ರಾಮ್ ಶ್ರೀರಾಮ್, ಏರ್​ಲೈನ್​ ಅನುಭವಿ ರಾಕೇಶ್ ಗಂಗ್ವಾಲ್ ಮತ್ತು ವರ್ಕ್‌ಡೇ ಸಿಇಒ ಮತ್ತು ಸಹ ಸಂಸ್ಥಾಪಕ ಅನೀಲ್ ಭೂಸ್ರಿ ಶ್ರೀಮಂತರ ಪಟ್ಟಿಯಲ್ಲಿರುವ ಭಾರತದ ಮೂಲದ ಅಮೆರಿಕನ್ನರು.

ಉಳಿದಂತೆ, ಅಮೇಜಾನ್ ಸಂಸ್ಥಾಪಕ ಜೆಫ್ ಬೆಜೋಸ್ (56) ಪ್ರಥಮ ಸ್ಥಾನದಲ್ಲಿದ್ದಾರೆ. ಈ ಮೂಲಕ ಸತತ ಮೂರನೇ ವರ್ಷದಲ್ಲಿ ಇವರು ಅಗ್ರಸ್ಥಾನ ಪಡೆದುಕೊಂಡಂತಾಗಿದೆ. 179 ಬಿಲಿಯನ್ ಅಮೆರಿಕನ್ ಡಾಲರ್ ಆಸ್ತಿಯನ್ನು ಇವರು ಹೊಂದಿದ್ದಾರೆ. ಇಷ್ಟು ಸಂಪತ್ತು ಗಳಿಸಿರುವ ವಿಶ್ವದ ಮೊದಲಿಗ ಎಂದೂ ಇದಾಗಲೇ ಇವರನ್ನು ಘೋಷಿಸಲಾಗಿದೆ.

ಬಿಲ್ ಆ್ಯಂಡ್​ ಮೆಲಿಂಡಾ ಗೇಟ್ಸ್ ಫೌಂಡೇಷನ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ 111 ಬಿಲಿಯನ್ ಅಮೆರಿಕನ್ ಡಾಲರ್ ಆಸ್ತಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ 85 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಮೂರನೇ ಸ್ಥಾನ, ಬರ್ಕ್‌ಷೈರ್ ಹ್ಯಾತ್​ವೇ ಸಿಇಒ ವಾರೆನ್ ಬಫೆಟ್ 4ನೇ ಸ್ಥಾನ, ಸಾಫ್ಟ್‌ವೇರ್ ದೈತ್ಯ ಒರಾಕಲ್ ಸಹ ಸಂಸ್ಥಾಪಕ ಲ್ಯಾರಿ ಎಲಿಸನ್‌ 72 ಬಿಲಿಯನ್ ಡಾಲರ್‌ಗಳೊಂದಿಗೆ 5ನೇ ಸ್ಥಾನದಲ್ಲಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2.5 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ಪಟ್ಟಿಯಲ್ಲಿ 339 ನೇ ಸ್ಥಾನದಲ್ಲಿದ್ದಾರೆ.

ಕರೊನಾ ವೈರಸ್​ನಿಂದ ಇಡೀ ವಿಶ್ವದ ಆರ್ಥಿಕ ಸ್ಥಿತಿಯಲ್ಲಿ ಏರುಪೇರಾಗಿದೆ ಎಂದು ಹೇಳಲಾಗುತ್ತಿದ್ದರೂ, ಅಮೆರಿಕದ 400 ಶ್ರೀಮಂತರ ಒಟ್ಟು ಆಸ್ತಿ 3.2 ಟ್ರಿಲಿಯನ್ ಡಾಲರ್ ಆಗಿದೆ. ಇದು ಹಿಂದಿನ ವರ್ಷಕ್ಕಿಂತ 240 ಬಿಲಿಯನ್ ಡಾಲರ್‌ಗಳಷ್ಟು ಏರಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net