

ನವದೆಹಲಿ: ಇಡೀ ವಿಶ್ವಕ್ಕೆ ಕರೊನಾ ಹಬ್ಬಿಸಿ ಆತಂಕ ಸೃಷ್ಟಿಸಿರುವ ಚೀನಾದ ವಿರುದ್ಧ ಬಹುತೇಕ ರಾಷ್ಟ್ರಗಳು ಧಿಕ್ಕಾರ ಹಾಕಿವೆ. ದಕ್ಕಿಂತಲೂ ಹೆಚ್ಚಾಗಿ ಚೀನಾ ವಸ್ತುಗಳ ನಿಷೇಧ ಮಾಡುವ ಮೂಲಕ ಭಾರತವಂತೂ ಚೀನಾದ ಪಾಲಿಗೆ ಅಕ್ಷರಶಃ ಆತಂಕ ಸೃಷ್ಟಿಸಿಬಿಟ್ಟಿದೆ.
ಇದಾಗಲೇ ಚೀನಾದ ಆ್ಯಪ್ಗಳ ಮೇಲೆ ನಿಷೇಧ ಹೇರಿ, ಚೀನಾದ ವಸ್ತುಗಳನ್ನು ಬಹುತೇಕ ಬಹಿಷ್ಕರಿಸಿರುವ ಭಾರತದಲ್ಲಿಯೇ ಇದೀಗ ಹಲವಾರು ವಸ್ತುಗಳು ತಯಾರಿಯಾಗುವ ಜತೆಗೆ ಆತ್ಮ ನಿರ್ಭರ ಭಾರತ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ಕನಸು ನನಸಾಗುತ್ತಾ ಸಾಗಿದೆ.
ಅದರ ಸಾಲಿಗೆ ಇದೀಗ ದೀಪಾವಳಿ ಸೇರ್ಪಡೆಯಾಗಿದೆ. ಇಷ್ಟು ವರ್ಷ ದೀಪಾವಳಿ ಸಮಯದಲ್ಲಿಯೂ ಚೀನಾದಿಂದಲೇ ಬಹುತೇಕ ಸಾಮಗ್ರಿಗಳು ಬರುತ್ತಿದ್ದವು. ಅಲ್ಲಿಯ ಅಗ್ಗದ ರೇಟ್ಗಾಗಿ ಜನರು ಸಹಜವಾಗಿಯೇ ಚೀನಾ ವಸ್ತುಗಳತ್ತ ಆಕರ್ಷಿತರಾಗುತ್ತಿದ್ದಾರೆ.
ಆದರೆ ಚೀನಾದ ವಸ್ತುಗಳ ಬಹಿಷ್ಕಾರದ ಬೆನ್ನಲ್ಲೇ ಇದೀಗ ಚೀನಾಗಿಂತಲೂ ಅಗ್ಗದ ದರದಲ್ಲಿ ದೀಪಾವಳಿಗೆ ಬೇಕಾಗುವ ಸಾಮಗ್ರಿಗಳು, ಆಲಂಕಾರಿಕ ವಸ್ತುಗಳೀಗ ಭಾರತದಲ್ಲಿಯೇ ಸಿಗುತ್ತವೆ.
ಈ ಬಾರಿಯಿಂದ ಮೇಡ್ ಇನ್ ಇಂಡಿಯಾ ದೀಪಾವಳಿ ಆಚರಿಸುವ ನಿಟ್ಟಿನಲ್ಲಿ ದೇಶದ ಅಗ್ರ ವ್ಯಾಪಾರಿಗಳ ಸಂಘಟನೆಯಾಗಿರುವ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ವತಿಯಿಂದ ದೀಪಾವಳಿಗೆ ಬೇಕಾಗುವ ಸಾಮಗ್ರಿಗಳ ತಯಾರಿಸಲಾಗಿದೆ. ಇದಾಗಲೇ ಇಂಡಿಯನ್ ಬಜಾರ್ ಹೆಸರಿನ ಸಂಸ್ಥೆ ಚೀನಾಕ್ಕೆ ಉತ್ತರ ನೀಡಲು ಸಿದ್ಧವಾಗಿದ್ದು, ನಾಲ್ಕು ರಾಜ್ಯಗಳಲ್ಲಿ ಆಲಂಕಾರಿಕ ವಸ್ತುಗಳ ತಯಾರಿಯನ್ನು ಎರಡು ತಿಂಗಳಿನಿಂದಲೇ ಶುರುಮಾಡಿದೆ.
ಮಹಾರಾಷ್ಟ್ರ, ಬಿಹಾರ, ಯುಪಿ ಮತ್ತು ಜಾರ್ಖಂಡ್‌ನ ಮಹಿಳಾ ಗುಂಪುಗಳು ದೀಪಾವಳಿಗೆ ಬೇಕಾಗುವ ಎಲ್ಲಾ ಸಾಮಗ್ರಿಗಳನ್ನು ತಯಾರಿಸುತ್ತಿದ್ದಾರೆ. ವಿದೇಶದಲ್ಲಿ ವಾಸಿಸುವ ಭಾರತೀಯ ಕುಟುಂಬಗಳು ದೀಪಾವಳಿಯಲ್ಲಿ ಬಳಸುವ ಸರಕುಗಳನ್ನು ಭಾರತದಿಂದಲೇ ಖರೀದಿಸಲೂ ತಯಾರಿನಡೆಸಲಾಗಿದೆ.
ಲಕ್ಷ್ಮಿ ಪೂಜೆಗೆ ಬಳಸುವ ವಸ್ತುಗಳಿಂದ ಹಿಡಿದು, ದೀಪದವರೆಗೆ ಎಲ್ಲವೂ ಇಲ್ಲಿ ಲಭ್ಯವಿದೆ. ವಸ್ತುಗಳ ಗುಣಮಟ್ಟದ ಮೇಲೆ ಬೆಲೆ ನಿಗದಿಯಾಗುತ್ತದೆ. ದೀಪಾವಳಿಗೆ ದೇಸಿ ವಸ್ತುಗಳನ್ನು ಬಳಸಲು ಹಾಗೂ ಹೆಚ್ಚಿನ ಮಾಹಿತಿಗೆ 8800449679 ನಂಬರ್ ಸಂಪರ್ಕಿಸುವಂತೆ ತಿಳಿಸಲಾಗಿದೆ.