

ಗಾಜಿಯಾಬಾದ್ (ಉತ್ತರ ಪ್ರದೇಶ): ಐಎಎಸ್ ಅಧಿಕಾರಿಯೊಬ್ಬರು ಮಗುವಿಗೆ ಜನ್ಮ ನೀಡಿದ ಕೇವಲ 14 ದಿನಗಳಲ್ಲೇ ಕೋವಿಡ್ ಕೆಲಸಕ್ಕೆ ವಾಪಸಾಗಿದ್ದಾರೆ. ಇದರಿಂದಾಗಿ ಎಲ್ಲೆಡೆ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ.
ಇಲ್ಲಿನ ಮೋದಿನಗರದ ಸಬ್ -ಡಿವಿಷನಲ್ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಆಗಿರುವ ಸೌಮ್ಯಾ ಪಾಂಡೆ, ಗಾಜಿಯಾಬಾದ್ ಜಿಲ್ಲೆಯ ಕೋವಿಡ್ ನೋಡಲ್ ಅಧಿಕಾರಿಯಾಗಿದ್ದಾರೆ. ಗರ್ಭಿಣಿಯಾಗಿದ್ದ ಅವರು, ಕಳೆದ ಜುಲೈನಿಂದ ಕೋವಿಡ್ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಗರ್ಭವತಿಯಾಗಿದ್ದ ಸೌಮ್ಯಾ ಜುಲೈನಿಂದ ಸೆಪ್ಟೆಂಬರ್ವರೆಗೂ ಗಾಜಿಯಾಬಾದ್‌ನ ಕೋವಿಡ್ ನೋಡಲ್ ಅಧಿಕಾರಿಯಾಗಿದ್ದರು. ಸೆಪ್ಟೆಂಬರ್‌ನಲ್ಲಿ 22 ದಿನಗಳ ರಜೆ ತೆಗೆದುಕೊಂಡಿದ್ದರು. ಪ್ರಸವದ ನಂತರ ಎರಡು ವಾರಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಬಾಣಂತನದ ನಡುವೆಯೂ ಮಗುವಿನೊಂದಿಗೆ ಕೆಲಸಕ್ಕೆ ಮರಳಿರುವ ಕಾರಣ, ಎಲ್ಲರೂ ಮೆಚ್ಚುಗೆ ಸೂಸಿದ್ದಾರೆ.
ಈ ಕುರಿತು ಮಾತನಾಡಿರುವ ಸೌಮ್ಯಾ, ನಾನು ಐಎಎಸ್ ಅಧಿಕಾರಿ. ನನ್ನ ಕರ್ತವ್ಯದ ಬಗ್ಗೆ ಗಮನಹರಿಸಬೇಕು. ಕರೊನಾ ಸೋಂಕಿನಿಂದಾಗಿ ಎಲ್ಲರ ಮೇಲೂ ಜವಾಬ್ದಾರಿ ಇದೆ. ಮಗುವಿಗೆ ಜನ್ಮ ನೀಡಿ, ಅದರ ಆರೈಕೆ ಮಾಡುವ ಶಕ್ತಿಯನ್ನು ಮಹಿಳೆಗೆ ದೇವರು ರಕ್ತಗತವಾಗಿ ನೀಡಿದ್ದಾನೆ. ಗ್ರಾಮೀಣ ಭಾರತದಲ್ಲಿ ಮಹಿಳೆಯರು ಗರ್ಭಿಣಿಯಾಗಿದ್ದಾಗ ಹಾಗೂ ಡೆಲಿವರಿ ನಂತರವೂ ಮನೆಯ ಕೆಲಸದ ಜತೆ ತಮ್ಮ ಜೀವನೋಪಾಯಕ್ಕೂ ಕೆಲಸ ಮಾಡುತ್ತಾರೆ. ಅವರು ಆ ರೀತಿ ಮಾಡುವಾಗ, ನಮಗೂ ಸಾಧ್ಯವಿದೆಯಲ್ಲವೆ? ಅದಕ್ಕಾಗಿಯೇ ಮೂರು ವಾರಗಳ ಮಗುವಿನೊಂದಿಗೆ ಆಡಳಿತಾತ್ಮಕ ಕೆಲಸವನ್ನ ಮಾಡುವಲ್ಲಿ ಶಕ್ತಳಾಗಿದ್ದೇನೆ ಎಂದಿದ್ದಾರೆ.
ದೇವರ ಆಶೀರ್ವಾದದೊಂದಿಗೆ ನಾನೂ ಸಹ ಆಡಳಿತದ ಕಾರ್ಯಗಳನ್ನು ನಿರ್ವಹಿಸುತ್ತಿದ್ದೇನೆ ಹಾಗೂ ನನ್ನ ಮಗುವಿನ ಆರೈಕೆಯನ್ನೂ ಮಾಡುತ್ತಿದ್ದೇನೆ' ಎಂದು ಅವರು ನುಡಿದರು.
ನಾನು ಗರ್ಭಿಣಿಯಾಗಿದ್ದಾಗ ಹಾಗೂ ಡೆಲಿವರಿ ಬಳಿಕ, ಜಿಲ್ಲಾ ಮ್ಯಾಜಿಸ್ಟ್ರೇಟ್ ಸೇರಿದಂತೆ ಇಡೀ ಆಡಳಿತ ವರ್ಗ ನನಗೆ ಬೆಂಬಲವಾಗಿ ನಿಂತಿದೆ. ಕುಟುಂಬದವರೂ ನನಗೆ ಸಾಕಷ್ಟು ಬೆಂಬಲ ನೀಡುತ್ತಿದ್ದಾರೆ. ನಾನು ಕರ್ತವ್ಯ ನಿರ್ವಹಿಸುತ್ತಿರುವ ಮಂಡಲ ಮತ್ತು ಗಾಜಿಯಾಬಾದ್ ಜಿಲ್ಲಾಡಳಿತ ನನಗೆ ಕುಟುಂಬವಿದ್ದಂತೆ, ನಾನು ಗರ್ಭಿಣಿಯಾಗಿದ್ದಾಗ ಹಾಗೂ ಪ್ರಸವದ ಬಳಿಕವೂ ಎಲ್ಲರೂ ಅಪಾರ ಬೆಂಬಲ ನೀಡಿದ್ದಾರೆ' ಎಂದು ಸೌಮ್ಯಾ ಹೇಳಿದರು.