

ಹಾಸನ: ತಾನು ಪ್ರೀತಿಸಿದ ಹುಡುಗಿ ಮೋಸ ಮಾಡಿದ್ದಕ್ಕೆ ಹಾಸನ ಜಿಲ್ಲೆಯ ಅರಸಿಕೆರೆಯ ಯುವಕನೊಬ್ಬ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ದಿಲೀಪ್ ಮೃತ ಯುವಕ.
ಕೆಲ ವರ್ಷಗಳಿಂದ ದಿಲೀಪ್ ಮತ್ತು ಕುಟುಂಬಸ್ಥರು ಬೆಂಗಳೂರಿನಲ್ಲಿ ನೆಲೆಸಿದ್ದು ಎಲ್ಲರೂ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅದೇ ಗಾರ್ಮೆಂರ್ಟ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಬೆಟ್ಟದಕೂರ್ಲಿ ಗ್ರಾಮದ ಯುವತಿಯೊಬ್ಬಳನ್ನು ದಿಲೀಪ್ ಪ್ರೀತಿಸುತ್ತಿದ್ದರು. ಕೆಲ ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸಿದ್ದಾರೆ.
ಆದರೆ ಮನೆಯ ಕಾರಣ ನೀಡಿ ಯುವತಿ ಪ್ರೀತಿ ಮಾಡುವುದಿಲ್ಲ ಎಂದಿದ್ದಾಳೆ. ಇದರಿಂದ ನೊಂದುಕೊಂಡಿರುವ ದಿಲೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವತಿಯ ಗ್ರಾಮವಾಗಿರುವ ಬೆಟ್ಟದಕೂರ್ಲಿಯಲ್ಲಿಯೇ ವಿಷ ಕುಡಿದು ದಿಲೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳಿಯರು ನೋಡಿ ತಕ್ಷಣ ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರೂ ದಿಲೀಪ್ ಬದುಕಲಿಲ್ಲ. ಸಾಯುವ ಮುನ್ನ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಯುವತಿಯ ಹೆಸರು ಹೇಳಿ ಆಕೆ ನನಗೆ ಮೋಸ ಮಾಡಿದ್ದಾಳೆ. ನನ್ನ ಕೈಲಿ ಬದುಕಲು ಆಗ್ತಿಲ್ಲ. ಅವಳಿಗಾಗಿ ನಾಲ್ಕೂವರೆ ವರ್ಷಗಳಿಂದ ಎಲ್ಲರನ್ನೂ ದೂರ ಮಾಡಿದೆ. ಈಗ ಮೋಸ ಹೋದೆ. ಒಂದು ತಿಂಗಳಿನಿಂದ ಊಟ- ತಿಂಡಿ ಸರಿಯಾಗಿ ಮಾಡಲಿಲ್ಲ. ನನ್ನ ಸಾವಿಗೆ ಯುವತಿ ಮತ್ತು ಅವಳ ಕುಟುಂಬದವರೇ ಕಾರಣ ಎಂದು ದಿಲೀಪ್ ಹೇಳಿದ್ದಾರೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.