

ಕಿಶನ್‌ಗಂಜ್ (ಬಿಹಾರ): ಎಂಟು ಮಂದಿ ಅಪ್ರಾಪ್ತೆಯರೂ ಸೇರಿದಂತೆ 12 ಮಂದಿಯನ್ನು ಮದುವೆಯಾದ ಬಿಹಾರದ ಕಿಶನ್‌ಗಂಜ್ ಜಿಲ್ಲೆಯ ಅನಾರ್ಕಲಿ ಗ್ರಾಮದ ನಿವಾಸಿಯೊಬ್ಬನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. 32 ವರ್ಷದ ಶಂಶಾದ್ ಪುರ್ನಿಯಾ ಎಂಬ ಈ ವ್ಯಕ್ತಿ 12 ಮಂದಿಯನ್ನು ನಿಖಾ ಮಾಡಿಕೊಂಡು ಅವರನ್ನೆಲ್ಲಾ ಏನು ಮಾಡಿದ್ದ ಎಂದು ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ತಾನೊಬ್ಬ ಅವಿವಾಹಿತ ಎಂದು ಹೇಳಿಕೊಂಡು ಕೆಲವೊಂದು ಮದುವೆಯಾಗಿದ್ದರೆ, ಬಾಲಕಿಯರನ್ನು ಅಪಹರಿಸಿ ಈತ ಮದುವೆಯಾಗುತ್ತಿದ್ದ. 2015 ರಲ್ಲಿ ಬಾಲಕಿ ಅಪಹರಣ ಮಾಡಿದ ಕೇಸ್ ದಾಖಲಾಗಿತ್ತು. ಅಂದಿನಿಂದಲೂ ಪೊಲೀಸರಿಗೆ ಬೇಕಾಗಿದ್ದ ಈತ ತನ್ನ ವಿರುದ್ಧ ದೂರು ನೀಡಿದ ಬಾಲಕಿಯನ್ನೇ ಮತ್ತೆ ಅಪಹರಿಸಿದ್ದ. ಅಲ್ಲದೇ, ಆಕೆಯೊಂದಿಗೆ ಮದುವೆಗೆ ಸಿದ್ಧನಾಗಿದ್ದ. ಈ ವಿಷಯ ತಿಳಿದ ಪೊಲೀಸರು ಈತನ ಹಿಂದೆ ಬಿದ್ದಾಗ ಭಯಾನಕ ಕಥೆಗಳು ತೆರೆದುಕೊಂಡಿವೆ.
ವಿಚಾರಣೆ ವೇಳೆ ಆತ ತನಗೆ ಈಗಾಗಲೇ 12 ಮದುವೆಗಳಾಗಿವೆ ಎಂದು ಬಾಯ್ಬಿಟ್ಟಿದ್ದಾನೆ. ತಾನು ಇವರನ್ನು ಮದುವೆಯಾಗಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಬಗ್ಗೆ ಹೇಳಿಕೊಂಡಿದ್ದಾನೆ. ಗಿಶನ್ಗಂಜ್ನ ಠಾಕೂರ್ಗಂಜ್ನ ರೆಡ್ಲೈಟ್ ಏರಿಯಾದಲ್ಲಿ ಈತ ಮದುವೆಯಾದವರನ್ನು ವೇಶ್ಯಾವಾಟಿಕೆಗೆ ನೂಕುತ್ತಿದ್ದ. ಇದಾಗಲೇ 12 ಮಂದಿಯನ್ನೂ ವೇಶ್ಯಾವಾಟಿಕೆಗೆ ನೂಕಿ ಹಣ ಮಾಡುತ್ತಿದ್ದ ಈತ ಈಗ ಪೊಲೀಸರ ಬಲೆಗೆ ಬಿದ್ದಿದ್ದು, ಆತನ ವಿರುದ್ಧ ಕೇಸ್ ದಾಖಲಾಗಿದೆ. ತಾನು ಮದುವೆಯಾದವರ ಪೈಕಿ ಕೆಲವರನ್ನು ಬೇರೆ ಬೇರೆ ದೇಶಗಳಿಗೆ ಈತ ಮಾರಾಟ ಕೂಡ ಮಾಡಿರುವ ಅಂಶ ಬೆಳಕಿಗೆ ಬಂದಿದೆ.
ಇದಾಗಲೇ ಇಷ್ಟು ಮದುವೆಯಾಗಿದ್ದರೂ 15 ವರ್ಷದ ಬಾಲಕಿಯ ಅಪಹರಣದ ಕೇಸ್ ಬಿಟ್ಟು ಬೇರೆ ಯಾವ ಕೇಸ್ಗಳೂ ದಾಖಲಾಗಲಿಲ್ಲ. ಇದು ಪೊಲೀಸರನ್ನು ಅಚ್ಚರಿಗೆ ತಳ್ಳಿದೆ. ಇದೀಗ ಬಾಲಕಿ ಸೇರಿದಂತೆ ಉಳಿದ 12 ಮಂದಿಯ ಪತ್ತೆಗೆ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.