ಕೋವಿಡ್​ ನಡುವೆಯೇ ಚೀನಾದಲ್ಲಿ ಮತ್ತೊಂದು ಭಯಾನಕ ವೈರಸ್​! ಜಗತ್ತಿಗೆ ಪುನಃ ಬಂತಾ ಸಂಕಟ?

pangolin
ಪಾಂಗೋಲಿನ್​
Published on

ಮೆಲ್ಬೋರ್ನ್: ಕೋವಿಡ್​ ಭೀತಿಯಿಂದ ಜನರು ಹೊರಬಂದಿದ್ದಾರೆ, ಇದರ ಹೊರತಾಗಿಯೂ ಕರೊನಾ ವೈರಸ್​ ಪತ್ತೆಯಾಗುತ್ತಲೇ ಇದೆ. ಕರೊನಾ ತವರು ಚೀನಾದಲ್ಲಿಯೂ ಕೋವಿಡ್​ಗೆ ಮತ್ತೊಮ್ಮೆ ಜನ ತತ್ತರಿಸಿ ಹೋಗಿದ್ದಾರೆ. ಇದರ ನಡುವೆಯೇ ಮಂಕಿಪಾಕ್ಸ್​ ಆತಂಕ ಸೃಷ್ಟಿಸಿದೆ. ಆದರೆ ಚೀನಾದಲ್ಲೀಗ ಹೊಸ ವೈರಸ್​ ಪತ್ತೆಯಾಗಿದ್ದು, ಜಗತ್ತೇ ತತ್ತರಿಸುವಂತಾಗಿದೆ.

ಲಾಂಗ್ಯಾ ಹೆನಿಪಾವೈರಸ್ ಎಂಬ ಹೊಸ ಸೋಂಕು ಕಾಣಿಸಿಕೊಂಡಿದೆ. ಚೀನಾದ ಶಾಂಡಾಂಗ್ ಮತ್ತು ಹೆನಿನ್ ಪ್ರಾಂತ್ಯಗಳಲ್ಲಿನ ಜನರಲ್ಲಿ ಇದು ಪತ್ತೆಯಾಗಿದೆ. 35 ಜನರಿಗೆ ಈ ಸೋಂಕು ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದ್ದರೂ ಇನ್ನೂ ಹೆಚ್ಚಿನ ಜನರಿಗೆ ಇದು ತಗುಲಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಪ್ರಾಂತ್ಯಗಳಲ್ಲಿ ಜ್ವರ ಲಕ್ಷಣಗಳು ಕಂಡುಬಂದಿರುವ ರೋಗಿಗಳ ಗಂಟಲು ಮಾದರಿಗಳಲ್ಲಿ ಇದು ಪತ್ತೆಯಾಗಿದೆ. ಈ ವೈರಸ್ ಅಪಾಯಕಾರಿ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಮನುಷ್ಯರಲ್ಲಿ ರೋಗ ತರಿಸುವ ಹೆಂಡ್ರಾ ಮತ್ತು ನಿಪಾ ವೈರಸ್​ಗಳಿಗೆ ಇದು ಸಂಬಂಧ ಹೊಂದಿದೆ. ತೀವ್ರ ಮಟ್ಟದಲ್ಲಿ ಸೋಂಕು ಉಂಟಾದರೆ ಮೂರನೇ ಒಂದರಷ್ಟು ಮನುಷ್ಯರನ್ನು ಸಾಯಿಸುವಷ್ಟು ಪ್ರಬಲವಾದ ವೈರಸ್ ಕುಟುಂಬಕ್ಕೆ ಈ ವೈರಸ್ ಸೇರಿದೆ ಎನ್ನಲಾಗಿದೆ. ಆದರೆ ಸದ್ಯ ಇದರಿಂದ ಮೃತಪಟ್ಟವರ ವರದಿಯಿನ್ನೂ ಬಂದಿಲ್ಲ.

ಲಾಂಗ್ಯಾ ಹೆನಿಪಾ ವೈರಸ್ ಪ್ರಾಣಿ ಜನ್ಯವಾಗಿದೆ. ಅಂದರೆ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಸಾಕು ಪ್ರಾಣಿಗಳು ಅಥವಾ ಕಾಡು ಪ್ರಾಣಿಗಳಿಂದ ವೈರಸ್ ಹರಡುತ್ತಿದೆಯಾ ಎಂಬುದರ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ. ಕುರಿ ಮತ್ತು ನಾಯಿಗಳಲ್ಲಿ ಈ ಸೋಂಕು ಇರುವುದನ್ನು ತಜ್ಞರು ಪತ್ತೆ ಮಾಡಿದ್ದಾರೆ. ಆದರೆ, ಬಹಳಷ್ಟು ಪಾಂಗೋಲಿನ್​ ಪ್ರಾಣಿಯಲ್ಲಿ ಈ ವೈರಸ್ ಇರುವುದು ಗೊತ್ತಾಗಿದೆ. ಹೀಗಾಗಿ ಇದರಿಂದಲೇ ಮನುಷ್ಯರಿಗೆ ವೈರಸ್ ಹರಡಿದೆ ಎಂದು ನಂಬಲಾಗಿದೆ.

ಆದರೆ ಇದು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದಾ ಎಂಬುದು ಇನ್ನೂ ಗೊತ್ತಾಗಲಿಲ್ಲ. ಈ ನಿಟ್ಟಿನಲ್ಲಿ ಚೀನಾ ತಜ್ಞರು ಸಂಶೋಧನೆ ನಡೆಸುತ್ತಿದ್ದಾರೆ. ಸದ್ಯ ಮಟ್ಟಿದೆ ಮನುಷ್ಯರಿಂದ ಮನುಷ್ಯರಿಗೆ ಸೋಂಕು ಹರಡುವ ಸಾಧ್ಯತೆ ವಿರಳ ಎಂದು ಅಭಿಪ್ರಾಯಪಡಲಾಗಿದೆ. 2019ರಲ್ಲಿ ಲಾಂಗ್ಯಾ ವೈರಸ್ ಮೊದಲ ಬಾರಿ ಮನುಷ್ಯರಲ್ಲಿ ಪತ್ತೆಯಾಗಿತ್ತು. ಆದರೆ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿರುವುದು ಈಗ.

ಸಣ್ಣ ಜ್ವರ, ಸುಸ್ತು, ಕೆಮ್ಮು, ಹಸಿವಾಗದಿರುವುದು, ಸ್ನಾಯು ನೋವು, ವಾಕರಿಕೆ ಮತ್ತು ತಲೆನೋವು ಇವು ಲಾಂಗ್ಯಾ ಹೆನಿಪಾ ವೈರಸ್ ರೋಗದ ಲಕ್ಷಣಗಳಾಗಿವೆ. ಇನ್ನು ಕೆಲವರಲ್ಲಿ ಮಾತ್ರ ನ್ಯುಮೋನಿಯಾ, ಯಕೃತ್ತು ಹಾಗೂ ಕಿಡ್ನಿ ಸಮಸ್ಯೆಗಳು ಕಾಣಿಸಿಕೊಂಡಿವೆ.

ಈ ಮಧ್ಯೆ ತೈವಾನ್‌ನ ರೋಗ ನಿಯಂತ್ರಣ ಕೇಂದ್ರ (ಸಿಡಿಸಿ), ವೈರಸ್ ಹರಡುವಿಕೆಯನ್ನು ಪರಿಶೀಲಿಸಲು ಮತ್ತು ಗುರುತಿಸಲು ಪರೀಕ್ಷಾ ಮಾದರಿಯನ್ನು ಸಿದ್ಧಪಡಿಸುತ್ತಿದೆ. ತೈವಾನ್​ನ ಪ್ರಯೋಗಾಲಯಗಳಲ್ಲಿ ಈ ಸೋಂಕಿನ ಪತ್ತೆಗೆ ನಿರ್ದಿಷ್ಟ ಮಾನದಂಡದ ನ್ಯೂಕ್ಲಿಯಿಕ್ ಆ್ಯಸಿಡ್ ಪರೀಕ್ಷಾ ಮಾದರಿಗಳ ಅಗತ್ಯವಿದೆ. ಇದರಿಂದ ಮಾನವ ಸೋಂಕು ಹರಡುವಿಕೆಯನ್ನು ಗಮನಿಸಬಹುದಾಗಿದೆ ಎಂದು ಸಿಡಿಸಿ ಉಪ ಪ್ರಧಾನ ನಿರ್ದೇಶಕ ಚ್ಯುವ್ಯಾಂಗ್ ಜೆನ್ ಸಿಯಾಂಗ್ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net