ಸಿನಿಮಾದಿಂದ ಪ್ರಭಾವಿತನಾಗಿ ಮುಕ್ತಿ ಬೇಕೆಂದು ಬೆಂಕಿ ಹಚ್ಚಿಕೊಂಡ ತುಮಕೂರಿನ ಯುವಕ!

tumkur
Published on

ತುಮಕೂರು: ಸಿನಿಮಾ, ಧಾರಾವಾಹಿ, ಮೊಬೈಲ್​ಫೋನ್​ಗಳು ಯುವ ಮನಸ್ಸಿನ ಪರಿಣಾಮ ಬೀರುವುದು ಗೊತ್ತಿರುವ ವಿಷಯವೇ. ಅದರಲ್ಲಿಯೂ ಒಳ್ಳೆಯದ್ದಕ್ಕಿಂತ ಹೆಚ್ಚಾಗಿ ಕೊಲೆ, ಸುಲಿಗೆಯಲ್ಲಿ ಸಿನಿಮಾದ ನಾಯಕ ತೊಡಗಿಸಿಕೊಂಡರೆ ತಾವೂ ಅವರಂತೆಯೇ ಆಗಬೇಕು ಎಂದು ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವವರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ.

ಅದೇ ರೀತಿ ತೆಲುಗುವಿನ ಚಿತ್ರವೊಂದನ್ನು ನೋಡಿ ಅದರಿಂದ ಪ್ರಭಾವಿತನಾದ ದ್ವಿತೀಯ ಪಿಯುಸಿಯ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತುಮಕೂರು ಮಧುಗಿರಿ ತಾಲ್ಲೂಕು ಗಿಡ್ಡಯ್ಯನಪಾಳ್ಯದಲ್ಲಿ ನಡೆದಿದೆ. ತೆಲುಗು ಭಾಷೆಯ ಅರುಂಧತಿ ಸಿನಿಮಾ ನೋಡಿ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. 22 ವರ್ಷದ ರೇಣುಕ ಎಂಬಾತ ಇಂಥದ್ದೊಂದು ಕೃತ್ಯಕ್ಕೆ ಇಳಿದಿದ್ದಾನೆ.

ಈ ಚಿತ್ರದಲ್ಲಿ ಖಳನಾಯಕನನ್ನು ನಾಯಕಿ ಸಾಯಿಸುತ್ತಾಳೆ. ನಂತರ ಆತ ಪಿಶಾಚಿಯಾಗಿ ಬರುತ್ತಾನೆ. ಆತನನ್ನು ಸಾಯಿಸಬೇಕು ಎಂದರೆ ನಾಯಕಿ ಸತ್ತು ಪುನರ್ಜನ್ಮ ಎತ್ತಬೇಕಾಗಿರುತ್ತದೆ. ಆಕೆ ಮೃತಪಟ್ಟ ಬಳಿಕ ಆಕೆಯ ಮೂಳೆಯಿಂದ ಆಯುಧ ಮಾಡಿ ಅದರಿಂದ ಪಿಶಾಚಿಯಾಗಿರುವ ಖಳನಾಯಕನನ್ನು ಕೊಲ್ಲಲು ಸಾಧ್ಯವಾಗಿರುತ್ತದೆ. ಆದ್ದರಿಂದ ನಾಯಕಿಯು ಮುಕ್ತಿ ಪಡೆಯಲು ತನ್ನನ್ನು ತಾನು ಸಾಯಿಸಿಕೊಂಡು, ನಂತರ ಖಳನಾಯಕನನ್ನು ಕೊಲ್ಲುವುದು ಈ ಚಿತ್ರದ ಕಥೆ. ಇಲ್ಲಿ ನಾಯಕಿಗೆ ಸೂಪರ್​ ನ್ಯಾಚುರಲ್​ ಪವರ್​ ಕೂಡ ಬಂದಿರುತ್ತದೆ.

ಇದನ್ನೆಲ್ಲಾ ನೋಡಿ ಪ್ರಭಾವಿತನಾಗಿರುವ ಯುವಕ ರೇಣುಕ ತನಗೂ ಮುಕ್ತಿ ಬೇಕು, ತನಗೂ ಸೂಪರ್​ನ್ಯಾಚುರಲ್​ ಪವರ್​ ಬೇಕು ಎಂದು ಹೇಳಿಕೊಂಡು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ತುಮಕೂರು ನಗರದಲ್ಲಿ ಪಿಯುಸಿ ಓದುತ್ತಿರುವ ಯುವಕ, ಕಾಲೇಜು ಮುಗಿಸಿಕೊಂಡು ಗ್ರಾಮಕ್ಕೆ ವಾಪಸ್ ಆಗಿದ್ದ. 2009ರಲ್ಲಿ ರಿಲೀಸ್​ ಆಗಿರುವ ಅರುಂಧತಿ ಸಿನಿಮಾವನ್ನು ಈತ ನೋಡಿದ್ದ. ಬಳಿಕ ಪೆಟ್ರೋಲ್​ ಬಂಕ್​ನಿಂದ 20 ಲೀಟರ್ ಪೆಟ್ರೋಲ್ ತಂದಿದ್ದ. ಅದರಲ್ಲಿ 1 ಲೀಟರ್ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ.

ಬೆಂಕಿ ಹಚ್ಚಿಕೊಂಡಿದ್ದನ್ನು ಪಾಲಕರು ನೋಡಿ, ಬೆಂಕಿ ನಂದಿಸಿ ಪ್ರಾಣ ರಕ್ಷಣೆ ಮಾಡಿದ್ದಾರೆ. ಬೆಂಕಿ ಹಚ್ಚಿಕೊಂಡಾಗ ನನಗೆ ಮುಕ್ತಿ ಬೇಕು ಮುಕ್ತಿ ಬೇಕು ಎಂದು ಈತ ನರಳಾಡುತ್ತಿದ್ದ. ಮಧುಗಿರಿ ಹಾಗೂ ತುಮಕೂರಿನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ‌ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net