ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೂ ತಾಜ್​ಮಹಲ್​ಗಿಲ್ಲ ತ್ರಿವರ್ಣ ದೀಪಗಳ ಅಲಂಕಾರ: ಕಾರಣ ಹೀಗಿದೆ...

taj
Published on

ನವದೆಹಲಿ: ಆಜಾದಿ ಕೀ ಅಮೃತ್​ ಮಹೋತ್ಸವಕ್ಕೆ ಭಾರತ ಸಕಲ ಸನ್ನದ್ಧವಾಗಿದೆ. 75ನೇ ಸ್ವಾತಂತ್ರ್ಯೋತ್ಸವವನ್ನು ಅದ್ಧೂರಿಯಿಂದ ಆಚರಿಸಲು ಹಲವಾರು ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸರ್ಕಾರಿ ಕಚೇರಿ, ಐತಿಹಾಸಿಕ ಕಟ್ಟಡಗಳು ಸೇರಿದಂತೆ ವಿವಿಧ ಕಟ್ಟಡಗಳು ತ್ರಿವರ್ಣ ದೀಪಗಳಿಂದ ಝಗಮಗಿಸಲು ಸಿದ್ಧವಾಗಿ ನಿಂತಿವೆ. ಆದರೆ ಐತಿಹಾಸಿಕ ಸ್ಮಾರಕಗಳಲ್ಲಿ ಒಂದಾಗಿರುವ ತಾಜ್​ಮಹಲ್​ನಲ್ಲಿ ಮಾತ್ರ ದೀಪ ಬೆಳಗುವುದಿಲ್ಲ!

ಕುತೂಹಲದ ಸಂಗತಿ ಎಂದರೆ, ಎರಡನೇ ಮಹಾಯುದ್ಧ ಗೆದ್ದಾಗ ವಿವಿಧ ದೀಪಗಳಿಂದ ಅಲಂಕಾರಗೊಂಡಿದ್ದ ತಾಜ್​ಮಹಲ್​, ರಾತ್ರಿಯಲ್ಲಿ ಬೆಳಗಿದ ಭಾರತದ ಮೊದಲ ಸ್ಮಾರಕ ಎನಿಸಿದೆ. ಆದರೆ ಈಗ ಮಾತ್ರ ರಾತ್ರಿ ಲೈಟಿಂಗ್​ಗೆ ಇಲ್ಲಿ ಅವಕಾಶವಿಲ್ಲ. ಹಾಗೆಂದು ಇದು ಈ ವರ್ಷಕ್ಕೆ ಮಾತ್ರ ಅನ್ವಯ ಆಗಿದ್ದಲ್ಲ. ತಾಜ್​ಮಹಲ್​ನಲ್ಲಿ ವಿಶೇಷ ದಿನಗಳೂ ಸೇರಿದಂತೆ ಯಾವ ದಿನವೂ ರಾತ್ರಿಯ ಹೊತ್ತು ವಿದ್ಯುದ್ದೀಪಗಳಿಂದ ಅಲಂಕರಿಸುವಂತಿಲ್ಲ, ಅಂದರೆ ತಾಜ್​ಮಹಲ್​ನಲ್ಲಿ ಯಾವುದೇ ಲೈಟಿಂಗ್ ಮಾಡಲು ಅನುಮತಿ ಇಲ್ಲ. 1997ರ ಮಾರ್ಚ್ 20ರಂದು ರಾತ್ರಿಯ ವೇಳೆ ಲೈಟಿಂಗ್​ ಮಾಡಿದ್ದೇ ಕೊನೆ. ಅಲ್ಲಿಂದ ಇಲ್ಲಿಯವರೆಗೂ ಲೈಟಿಂಗ್​ಗೆ ಇಲ್ಲಿ ಅವಕಾಶವಿಲ್ಲ.

ಆಗಿದ್ದೇನೆಂದರೆ, 1997ರ ಮಾರ್ಚ್ 20ರಂದು ಪ್ರಸಿದ್ಧ ಪಿಯಾನೋ ವಾದಕ ಯಾನಿ ಅವರ ಸಂಗೀತ ಕಛೇರಿ ತಾಜ್​ಮಹಲ್​ನಲ್ಲಿ ನಡೆದಿತ್ತು. ಈ ಸಂದರ್ಭದಲ್ಲಿ ರಾತ್ರಿಯೆಲ್ಲಾ ವಿದ್ಯುದ್ದೀಪಗಳಿಂದ ತಾಜ್​ಮಹಲ್​ ಅನ್ನು ಅಲಂಕರಿಸಲಾಗಿತ್ತು. ಆದರೆ ಮರುದಿನ ತಾಜ್ ಮಹಲ್ ಸುತ್ತಲೂ ಸತ್ತ ಕೀಟಗಳು ಕಂಡುಬಂದವು. ತಾಜ್​ಮಹಲ್​ನ ಅಮೃತಶಿಲೆಗೆ ಇದರಿಂದ ಹಾನಿಯಾಗುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ರಾಸಾಯನಿಕ ವಿಭಾಗವು ರಾತ್ರಿಯಲ್ಲಿ ರಾಜ್​ ಮಹಲ್​ನಲ್ಲಿ ದೀಪಗಳನ್ನು ಬೆಳಗಿಸಬಾರದು ಎಂದು ಶಿಫಾರಸು ಮಾಡಿತು. ಅಲ್ಲಿಂದ ಇಲ್ಲಿಯವರೆಗೂ ದೀಪ ಬೆಳಗುವುದಿಲ್ಲ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ವಿಜಯ್ ಉಪಾಧ್ಯಾಯ.

'ಆಜಾದಿ ಕಾ ಅಮೃತ ಮಹೋತ್ಸವ' ಆಚರಣೆಯ ಭಾಗವಾಗಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಸಂರಕ್ಷಿಸಲ್ಪಟ್ಟ ದೇಶದ ಸುಮಾರು 3,500 ಸ್ಮಾರಕಗಳಿಗೆ ಆಗಸ್ಟ್ 5 ಮತ್ತು 15 ರ ನಡುವೆ ಉಚಿತವಾಗಿ ಭೇಟಿ ನೀಡಬಹುದು. ಈ ನಿಯಮವು ತಾಜ್ ಮಹಲ್​ಗೂ ಅನ್ವಯವಾಗಲಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಗಂಗಾಪುರಂ ಕಿಶನ್ ರೆಡ್ಡಿ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net