'ಶಹಬ್ಬಾಸ್​ ಗ್ರೇಟಾ, ಎಫ್​ಐಆರ್​ಗೆ ಹೆದರಬೇಡ... ಹೋರಾಟ ಮುಂದುವರೆಸು... ನಮ್ಮ ಸಂಘಕ್ಕೆ ಸ್ವಾಗತ...'

kanhayyakumar
Published on

ನವದೆಹಲಿ: ರೈತರ ಪ್ರತಿಭಟನೆಯ ಹೆಸರಿನಲ್ಲಿ ವಿಶ್ವಮಟ್ಟದಲ್ಲಿ ಭಾರತಕ್ಕೆ ಹೇಗೆ ಕಪ್ಪುಮಸಿ ಬಳಿಯಬೇಕು ಎನ್ನುವ ಡಾಕ್ಯುಮೆಂಟರಿ ಇರುವ ಟೂಲ್​ಕಿಟ್​ ಕುರಿತು ಪೋಸ್ಟ್​ ಮಾಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿರುವ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್​ಬರ್ಗ್​​ಗೆ ವಿದ್ಯಾರ್ಥಿ ನಾಯಕ ಹಾಗೂ ರಾಜಕಾರಣಿ ಕನ್ನಯ್ಯ ಕುಮಾರ್ ಬೆಂಬಲ ಸೂಚಿಸಿದ್ದಾರೆ.

ವಿಶ್ವಮಟ್ಟದಲ್ಲಿ ಭಾರತದ ವಿರುದ್ಧ ಯಾವೆಲ್ಲಾ ರೀತಿಯಲ್ಲಿ ಪ್ರತಿಭಟನೆ ಮಾಡಬಹುದು ಎನ್ನುವ ಮಾಹಿತಿಗಳಿರುವ ಡಾಕ್ಯುಮೆಂಟ್‌ ಒಂದನ್ನು ಟ್ವೀಟ್‌ ಮಾಡಿದ್ದಳು ಗ್ರೇಟಾ. ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದ ಗ್ರೆಟಾ ಥನ್ಬರ್ಗ್ ಸಹಾಯವಿದ್ದವರಿಗೆ ಈ ಟೂಲ್ ಕಿಟ್​ಗಳನ್ನು ನೀಡುವುದಾಗಿ ಹೇಳಿದ್ದಳು. ಈಕೆಯ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಡಿಲೀಟ್​ ಮಾಡಿದ್ದಳು.

ಈಕೆ ಪೋಸ್ಟ್​ ಮಾಡಿರುವ ಟೂಲ್​ಕಿಟ್​ ರಚನಾಕಾರರ ವಿರುದ್ಧ ಎಫ್​ಐಆರ್​ ದಾಖಲು ಮಾಡಲಾಗಿದೆ. ಎಫ್​ಐಆರ್​ನಲ್ಲಿ ಗ್ರೇಟಾ ಹೆಸರು ಕೇಳಿಬಂದಿದ್ದರೂ ನಂತರ ಆಕೆಯನ್ನು ಅದರಲ್ಲಿ ಸೇರಿಸಿಲ್ಲ ಎಂಬ ಮಾಹಿತಿ ಬಂದಿದೆ. ಆದರೆ ಈಕೆಯ ವಿರುದ್ಧವೂ ಎಫ್​ಐಆರ್​ ದಾಖಲಾಗಿದೆ ಎಂದು ಸುದ್ದಿಯಾದ ಬೆನ್ನಲ್ಲೇ ಕನ್ಹಯ್ಯ ಕುಮಾರ್​ ಟ್ವೀಟ್​ ಮಾಡುವ ಮೂಲಕ ಗ್ರೇಟಾಗೆ ಹುರಿದುಂಬಿಸಿದ್ದಾರೆ.

ಪ್ರೀತಿಯ ಗ್ರೆಟಾ ಥನ್ಬರ್ಗ್ ನಿನಗೆ ನಮ್ಮ ಕ್ಲಬ್ ಗೆ ಸ್ವಾಗತ. ದೆಹಲಿ ಪೊಲೀಸರು ಜಯ್ ಷಾ ಅವರ ತಂದೆಯ (ಕೇಂದ್ರ ಗೃಹ ಸಚಿವ ಅಮಿತ್ ಷಾ) ನಿರ್ದೇಶನದ ಮೇರೆಗೆ ಎಫ್‌ಐಆರ್ ದಾಖಲಿಸಿದ್ದಾರೆ. ನೀನು ಉತ್ತಮ ದಾರಿಯಲ್ಲಿ ಹೋರಾಟ ನಡೆಸುತ್ತಿರುವೆ. ಸರಿಯಾದ ದಿಕ್ಕಿನಲ್ಲಿ ಇತಿಹಾಸ ನಿರ್ಮಿಸಲಿರುವೆ. ಇದರ ಭಾಗವಾಗಿ ನನ್ನ ಹಲವು ಸ್ನೇಹಿತರು ಈಗಾಗಲೇ ಜೈಲಿನಲ್ಲಿದ್ದಾರೆ, ನೀನೂ ನಿರಂತರವಾಗಿ ಹೋರಾಟ ಮಾಡುತ್ತಿರು ಎಂದು ಶಹಬ್ಬಾಸ್​ಗಿರಿ ಕೊಟ್ಟಿದ್ದಾರೆ.

ಎಫ್‌ಐಆರ್​ನಲ್ಲಿ ತನ್ನ ಹೆಸರು ಇದೆ ಎಂದುಕೊಂಡಿದ್ದ ಗ್ರೇಟಾ ಆ ನಂತರೂ ಟ್ವೀಟ್​ ಮಾಡಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಳು. ದ್ವೇಷ, ಬೆದರಿಕೆಗಳಿಗೆ ಹೆದರುವುದಿಲ್ಲ, ಮಾನವ ಹಕ್ಕುಗಳ ಉಲ್ಲಂಘನೆಯಿಂದ ನನ್ನ ನಿಲುವು ಬದಲಾಗುವುದಿಲ್ಲ ಎಂದಿದ್ದಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net