

ನವದೆಹಲಿ: ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕುಲೇಟರ್ ಪ್ರಶಸ್ತಿಗೆ ಭಾರತದ ಯುವಕ ನೀಲಕಂಠ ಭಾನು ಪ್ರಕಾಶ್ ಭಾಜನರಾಗಿದ್ದಾರೆ. ಮೈಂಡ್ ಸ್ಪೋರ್ಟ್ಸ್ ಒಲಿಂಪಿಯಾಡ್ ಮಾನಸಿಕ ಲೆಕ್ಕಚಾರ ವಿಶ್ವ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಇವರಿಗೆ ಮೊದಲ ಸ್ಥಾನ ಸಿಕ್ಕಿದೆ.
ಆಗಸ್ಟ್ 15ರಂದು ಲಂಡನ್‍ನಲ್ಲಿ ನಡೆದ ಮಾನಸಿಕ ಲೆಕ್ಕಚಾರ ವಿಶ್ವ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹೈದರಾಬಾದ್‌ನ ನೀಲಕಂಠ ಭಾನು ಪ್ರಕಾಶ್ ಈ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ.
ಇವರು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ. ದೆಹಲಿಯ ಸೇಂಟ್ ಸ್ಟೀಫನ್ ಕಾಲೇಜಿನಲ್ಲಿ ಗಣಿತ ಪದವಿ ಪಡೆದುಕೊಂಡಿದ್ದಾರೆ . ನೀಲಕಂಠ್ ಅವರು ತಮ್ಮ 5 ನೇ ವಯಸ್ಸಿನಲ್ಲಿ ಎಸ್ ಐಪಿ ಅಬಾಕಸ್ ತರಗತಿಗೆ ಸೇರಿಕೊಂಡಿದ್ದರು ಹಾಗೂ ಅಲ್ಲಿ ನೀಡುವ ಗ್ರ್ಯಾಂಡ್ ಮಾಸ್ಟರ್ ನ ಒಂಬತ್ತು ಹಂತಗಳನ್ನು ಪೂರ್ಣಗೊಳಿಸಿದ್ದರು.
ಈ ಸ್ಪರ್ಧೆಯಲ್ಲಿ ಇಂಗ್ಲೆಂಡ್, ಯುಎಸ್, ಜರ್ಮನಿ, ಫಾನ್ಸ್, ಗ್ರೀಸ್ ಸೇರಿದಂತೆ 13 ದೇಶಗಳಿಂದ 30 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು. ವಯಸ್ಸಿನ ಮಿತಿ ಇಲ್ಲದ ಈ ಕಾರ್ಯಕ್ರಮದಲ್ಲಿ 57 ವರ್ಷ ಗಣಿತ ಪರಿಣತರು ಭಾಗಿಯಾಗಿದ್ದರು. 65 ಅಂಕಗಳ ಮುನ್ನಡೆಯೊಂದಿಗೆ ನೀಲಕಂಠ ಮೊದಲ ಸ್ಥಾನ ಪಡೆದಿದ್ದಾರೆ.
ನೀಲಕಂಠ ಭಾನು ಪ್ರಕಾಶ್, ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕುಲೇಟರ್ ಪ್ರಶಸ್ತಿ ಜೊತೆಗೆ ನಾಲ್ಕು ವಿಶ್ವ ದಾಖಲೆಗಳು ಮತ್ತು 50 ಲಿಮ್ಕಾ ದಾಖಲೆಗಳನ್ನು ಮಾಡಿದ್ದಾರೆ.
ಮೈಂಡ್ ಸ್ಪೋರ್ಟ್ಸ್ ಒಲಿಂಪಿಯಾಡ್ ಸ್ಪರ್ಧೆಯನ್ನು 100 ಮೀಟರ್ ಸ್ಪ್ರಿಂಟ್‍ಗೆ ಹೋಲಿಸಿದ ಅವರು, ಉಸೇನ್ ಬೋಲ್ಟ್ 100 ಮೀಟರ್ ಓಟವನ್ನು 9.8 ಸೆಕೆಂಡಿಗೆ ಓಡಿದಾಗ ನಾವು ಸಂಭ್ರಮಿಸುತ್ತೇವೆ. ಯಾವುದು ಅಸಾಧ್ಯವೋ ಅದನ್ನು ದೇಹ ಮಾಡುತ್ತದೆ ಎಂದಾಗ ನಮಗೆ ಸಂಭ್ರಮವಾಗುತ್ತದೆ. ಅದೇ ರೀತಿ ಈ ಗಣಿತ ಒಲಿಂಪಿಯಾಡ್ ಸ್ಪರ್ಧೆ ಎಂದು ನೀಲಕಂಠ ಭಾನು ಪ್ರಕಾಶ್ ಬಣ್ಣಿಸಿದ್ದಾರೆ.
ಇವರು ಈ ಮೊದಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಅಬಾಕಸ್ ಚಾಂಪಿಯನ್ 13 ಹಾಗೂ ರಾಷ್ಟ್ರೀಯ ಅಬಾಕಸ್ ಚಾಂಪಿಯನ್ ಸರಣಿ 11 ಮತ್ತು 12ರ ವಿಜೇತರಾಗಿದ್ದಾರೆ.