ಅಪ್ರಾಪ್ತೆ ಸ್ವ ಇಚ್ಛೆಯಿಂದ ಮದುವೆಯಾದರೆ ಗಂಡನ ಜತೆ ಇರಬಹುದೆ? ಹೈಕೋರ್ಟ್​ ಏನು ಹೇಳಿದೆ ನೋಡಿ...

marriage
Published on

ಅಲಹಾಬಾದ್: ಹೆಣ್ಣುಮಕ್ಕಳು ಮದುವೆಗೆ ನಿಗದಿ ಮಾಡಿರುವ ಪ್ರಾಪ್ತ ವಯಸ್ಕರಾಗಿರದೇ ಅಪ್ರಾಪ್ತರಾಗಿರುವ ವೇಳೆಯೇ ಮದುವೆಯಾಗಿದ್ದರೆ ಆ ಮದುವೆಗೆ ಕಾನೂನಿನ ಅಡಿ ಮಾನ್ಯತೆ ಇಲ್ಲ. ಒಂದು ವೇಳೆ ಅಪ್ರಾಪ್ತ ಹೆಣ್ಣುಮಕ್ಕಳು ಸ್ವ ಇಚ್ಛೆಯಿಂದ ಮದುವೆಯಾಗಿದ್ದರು ಕೂಡ ಗಂಡನೊಂದಿಗೆ ಇರಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.

ಯಾವುದೇ ಕಾರಣಕ್ಕೂ ಅಪ್ರಾಪ್ತರ ಮದುವೆಗೆ ಕಾನೂನು ಸಮ್ಮತಿ ನೀಡದ ಕಾರಣ, ಬಾಲಕಿ ತನ್ನ ಗಂಡನ ಜತೆ ಬಾಳಲು ಅವಕಾಶವಿಲ್ಲ. ಒಮ್ಮೆ ಆಕೆ ಪ್ರಾಪ್ತ ವಯಸ್ಕಳಾದರೆ, ಆಗ ಅವಳು ಗಂಡನ ಜತೆ ಬಾಳಬೇಕೋ ಅಥವಾ ಬಿಡಬೇಕೋ ಎನ್ನುವುದನ್ನು ನಿರ್ಧರಿಸಬಹುದು. ಈ ನಿರ್ಧಾರವನ್ನು ತೆಗೆದುಕೊಳ್ಳಲು ಆಕೆ ಸ್ವತಂತ್ರಳಾಗಿದ್ದಾಳೆ. ಒಂದು ವೇಳೆ ಆಕೆ ಒಪ್ಪಿದರೆ ಮಾತ್ರ ಗಂಡನ ಜತೆ ಬಾಳಬಹುದು ಎಂದು ನ್ಯಾಯಮೂರ್ತಿ ಜೆ.ಜೆ. ಮುನೀರ್ ನೇತೃತ್ವದ ಪೀಠ ಹೇಳಿದೆ.

ಹಾಪುರದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೋರ್ಟ್​ ಈ ತೀರ್ಪು ನೀಡಿದೆ. ಬಾಲಕಿಯ ತಂದೆ ಕೋರ್ಟ್​ ಮೊರೆ ಹೋಗಿದ್ದರು. ಪಿಂಟೋ ಎಂಬಾತ ತನ್ನ ಅಪ್ರಾಪ್ತ ಮಗಳಿಗೆ ಆಮಿಷ ಒಡ್ಡಿ ಮದುವೆಯಾಗಿದ್ದಾನೆ ಎನ್ನುವುದು ಅವರ ದೂರಾಗಿತ್ತು. ಆದರೆ ಹಾಪುರದ ಕೋರ್ಟ್​ ಬಾಲಕಿ ಮದುವೆಯಾಗಿರುವ ಕಾರಣ, ಗಂಡನ ಜತೆ ಬಾಳಬಹುದು ಎಂದಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್​ ಮೊರೆ ಹೋಗಿದ್ದರು.

ಬಾಲಕಿಗೆ 16 ವರ್ಷ ಆಗಿರುವ ಕಾರಣ, ಆಕೆಯಿನ್ನೂ ಕಾನೂನಿನ ಅಡಿ ಅಪ್ರಾಪ್ತಳಾಗಿದ್ದು, ಗಂಡನ ಜತೆ ಬಾಳುವಂತೆ ಇಲ್ಲ. ಈ ಮದುವೆ ಕಾನೂನಿನ ದೃಷ್ಟಿಯಲ್ಲಿ ಅನೂರ್ಜಿತವಾಗಿದೆ. ಆಕೆಗೆ 18 ವರ್ಷ ತುಂಬಿದ ಮೇಲೆ ಬೇಕಿದ್ದರೆ ಗಂಡನ ಜತೆ ಬಾಳುವ ತೀರ್ಮಾನ ತೆಗೆದುಕೊಳ್ಳಬಹುದು ಎಂದ ಕೋರ್ಟ್​, ಕೆಳಹಂತದ ಕೋರ್ಟ್​ ನೀಡಿದ್ದ ಆದೇಶವನ್ನು ವಜಾ ಮಾಡಿದೆ. ಬಾಲಕಿ ಮೇಜರ್​ ಆಗುವವರೆಗೆ ಮನೆಯಲ್ಲಿಯೇ ಇರಿಸಿಕೊಂಡು ಜಾಗೃತೆ ಮಾಡುವಂತೆ ಕೋರ್ಟ್​ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net