‘ವಧು’ವಿನ ಹುಡುಕಾಟದಲ್ಲಿ 80 ವರ್ಷದ ವೃದ್ಧ: ಮ್ಯಾಟ್ರಿಮೋನಿ ಸೈಟ್‌ ನೋಡಿ ಗರಂ ಆದ ಮಗನಿಂದ ಭೀಕರ ಕೊಲೆ!

murder
Published on

ಮುಂಬೈ: ಮತ್ತೊಂದು ಮದುವೆಯಾಗಲು ಮ್ಯಾಟ್ರಿಮೋನಿ ಸೈಟ್‌ನಲ್ಲಿ ನೋಂದಾಯಿಸಿಕೊಂಡಿದ್ದ 80 ವರ್ಷದ ತಂದೆಯನ್ನು ಬರ್ಬರವಾಗಿ ಮಗ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಶಂಕರ್ ರಾಂಭೌ ಬೋರ್ಹಾಡೆ ಎನ್ನುವವರು ಮಗ ಶೇಖರ‌ ಎಂಬಾತನಿಂದ ಕೊಲೆಯಾಗಿದ್ದಾರೆ. 80 ವರ್ಷ ವಯಸ್ಸಾದರೂ ಈ ವಯಸ್ಸಿನಲ್ಲಿ ನಿನಗೆ ಮತ್ತೊಂದು ಮದುವೆ ಏಕೆ ಎಂದು ಅಪ್ಪ-ಮಗನ ನಡುವೆ ಜಗಳವಾಗಿ ಕೊನೆಗೆ ಸಿಟ್ಟಿನಿಂದ ಮಗ ರುಬ್ಬುವ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ.

ವೈಶಂಪಾಯನಲಿ ಪ್ರದೇಶದ ಹೌಸಿಂಗ್ ಸೊಸೈಟಿಯಲ್ಲಿ ನೆಲೆಸಿದ್ದರು ಅಪ್ಪ-ಮಗ. ಕೆಲ ತಿಂಗಳ ಹಿಂದೆ ಶಂಕರ್‌ ಅವರ ಪತ್ನಿ ತೀರಿಕೊಂಡಿದ್ದರು. ಈ ಇಳಿ ವಯಸ್ಸಿನಲ್ಲಿ ಆಸರೆಯಾಗಿ ಪತ್ನಿ ಇರಬೇಕು ಎಂದಿದ್ದ ಶಂಕರ್‌ ಅವರು, ಮಗನ ವಿರೋಧದ ನಡುವೆಯೂ ಮ್ಯಾಟ್ರಿಮೋನಿ ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು. ಇದನ್ನು ಕಂಡು ಮಗ ಶೇಖರ್‌ ವಿಪರೀತ ಕೋಪಗೊಂಡಿದ್ದರು.

ನಂತರ ಇಬ್ಬರ ನಡುವೆ ಜಗಳ ತಾರಕಕ್ಕೇರಿದ್ದು, ಮಗ ಚಾಕುವಿನಿಂದ ತನ್ನ ತಂದೆಯ ಕತ್ತನ್ನು ಕೊಯ್ದಿದ್ದಾನೆ. ನಂತರ ಸಾವು ಬದುಕಿನ ನಡುವೆ ನರಳುತ್ತಿದ್ದ ತಂದೆಯನ್ನು ನೋಡಿದ ಶೇಖರ್, ತಲೆಗೆ ರುಬ್ಬುವ ಕಲ್ಲಿನಿಂದ ಹೊಡೆದಿದ್ದಾನೆ. ಇಷ್ಟು ಮಾಡಿ ಪೊಲೀಸ್ ಠಾಣೆಗೆ ತೆರಳಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಶೇಖರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net