

ಇಂಡೋನೇಷ್ಯಾ: ಈಗ ಬಾಲಿವುಡ್, ಸ್ಯಾಂಡಲ್ವುಡ್ ಎಲ್ಲೆಡೆ ಒಂದೇ ಮಾತು, ಅದೇ ಡ್ರಗ್ಸ್. ಕರೊನಾ ವೈರಸ್ ಸುದ್ದಿಗಳನ್ನು ಹಿಂದಕ್ಕೆ ಹಾಕಿ ಈಗ ಎಲ್ಲರ ಬಾಯಲ್ಲೂ ಡ್ರಗ್ಸ್ ಸುದ್ದಿಗಳೇ. ಮಾದಕ ಲೋಕದ ಬೃಹತ್ ಜಾಲವನ್ನೇ ಭೇದಿಸುವಲ್ಲಿ ತನಿಖಾಧಿಕಾರಿಗಳು ನಿರತರಾಗಿದ್ದಾರೆ.
ಇದು ಭಾರತದ ಮಾತಾದರೆ, ಇದೀಗ ಇಂಡೋನೇಷಿಯಾದಲ್ಲಿ ಕುತೂಹಲ ಅಷ್ಟೇ ವಿಚಿತ್ರ, ಸೋಜಿಗ ಎನಿಸಿರುವ ಘಟನೆಯೊಂದು ನಡೆದಿದ್ದು, ಜೈಲಾಧಿಕಾರಿಗಳು ತಲೆತಲೆ ಚಚ್ಚಿಕೊಳ್ಳುವಂತೆ ಮಾಡಿದೆ.
ಅದೇನೆಂದರೆ ಡ್ರಗ್ಸ್ ದಂಧೆಯ ಪ್ರಮುಖ ಅಪರಾಧಿ ಡ್ರಗ್ ಪೆಡ್ಲರ್ ಒಬ್ಬ ತಾನಿರುವ ಜೈಲಿನ ಸೆಲ್ನಲ್ಲಿಯೇ ಸುರಂಗ ತೋಡಿ ಅಲ್ಲಿಂದಲೇ ಎಸ್ಕೇಪ್ ಆಗಿದ್ದಾನೆ! ಅಕ್ಕ ಪಕ್ಕ ಇರುವವರಿಗೆ ಒಂದಿನಿತು ಸುಳುವು ನೀಡದೇ ಬೃಹದಾಕಾರದ ಸುರಂಗ ತೋಡಿ ಪರಾರಿಯಾಗಿದ್ದಾನೆ ಎಂದರೆ ಆತ ಅದೆಂಥ ಅಸಾಧ್ಯ ಮನುಷ್ಯ ಇರಬಹುದು ಅಲ್ಲವೆ?
ಈತಿನ ಹೆಸರು ಕೋಯ್ ಚ್ಯಾಂಗ್ಪಾನ್. ಚೀನಾ ಮೂಲಕ ಈತ, ಡ್ರಗ್ಸ್ ಪೂರೈಕೆ ಸೇರಿದಂತೆ ಹಲವಾರು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಈತ ಇಂಡೋನೇಷಿಯಾದಲ್ಲಿಯೂ ತನ್ನ ಜಾಲ ವಿಸ್ತರಿಸಿದ್ದ. ಅಲ್ಲಿ ಸಿಕ್ಕಿಬಿದ್ದಿದ್ದ.
ಇದನ್ನೂ ಓದಿ: ವಿಚ್ಛೇದನಕ್ಕೆ ಒಪ್ಪಿದವಳು ಈಗ ಕೋರ್ಟ್ಗೆ ಬರುತ್ತಲೇ ಇಲ್ಲ: ನನಗೇನು ಪರಿಹಾರವಿದೆ?
ಈತ ಮಾಡಿರುವ ಅಪರಾಧಕ್ಕಾಗಿ ಇಲ್ಲಿಯ ಕೋರ್ಟ್ ಗಲ್ಲುಶಿಕ್ಷೆ ವಿಧಿಸಿತ್ತು. ಇಂಡೋನೇಷಿಯಾದ ರಾಜಧಾನಿ ಜಕಾರ್ತಾದ ಕೋರ್ಟ್ನಿಂದ ಮರಣದಂಡನೆಗೆ ಒಳಗಾಗಿದ್ದ ಈತನನ್ನು ಬಂಧಿಸಿ ಇಡಲಾಗಿತ್ತು. ಆದರೆ ಅಲ್ಲಿಂದಲೇ ಈತ ಭಾರಿ ಸುರಂಗ ತೋಡಿಕೊಂಡು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ.
ಸರಿಸುಮಾರು 100 ಅಡಿ ಉದ್ದದ ಸುರಂಗವನ್ನು ತೋಡಿ ಅದರ ಮೂಲಕ ಕಾರಾಗೃಹದ ಮುಖ್ಯ ಒಳಚರಂಡಿಯನ್ನು ತಲುಪಿದ್ದಾನೆ. ಒಳಚರಂಡಿ ಮುಖಾಂತರ ಹೊರಕ್ಕೆ ಹೋಗಿದ್ದಾನೆ.
ಅಷ್ಟಕ್ಕೂ ಈತನಿಗೆ ಸುರಂಗ ತೋಡಲು ಸಲಕರಣೆ ಎಲ್ಲಿ ಸಿಕ್ಕಿತು ಎಂದು ಪ್ರಶ್ನಿಸಬಹುದು. ಮಹಾ ಬುದ್ಧಿವಂತ ಕೋಯ್, ಜೈಲಿನ ತೋಟದಲ್ಲಿ ಬಳಸುತ್ತಿದ್ದ ಸಲಕರಣೆಗಳನ್ನ ಕದ್ದು ತಂದು ಸುರಂಗ ತೋಡಿದ್ದಾನೆ! ಅಂತೂ ಗಲ್ಲುಶಿಕ್ಷೆಯಿಂದ ಎಸ್ಕೇಪ್ ಆಗಿರುವ ಈತನ ಹುಡುಕಾಟಕ್ಕೆ ಭಾರಿ ತಂಡ ರಚನೆಯಾಗಿದೆ. ಜತೆಗೆ ಜೈಲು ಅಧಿಕಾರಿಗಳು ಪೇಚಿಗೆ ಸಿಲುಕಿದ್ದು, ಅವರ ವಿರುದ್ಧ ತನಿಖೆ ನಡೆಯುತ್ತಿದೆ.