ಅಪ್ಪನ ವಿರುದ್ಧ ಕೋರ್ಟ್​ಗೆ ಹೋದ ಮಗಳು: ಕಾರಣ ಕೇಳಿದ್ರೆ ನಗೋದು ಗ್ಯಾರಂಟಿ!

LUDO
Published on

ಭೋಪಾಲ್: ಚಿಕ್ಕಪುಟ್ಟ ಕಾರಣಗಳಿಗೂ ಕೆಲವರು ಕೋರ್ಟ್​ ಮೆಟ್ಟಿಲೇರೋದನ್ನು ನೋಡಿದ್ದೇವೆ. ಇದು ಹೆಚ್ಚಾಗಿ ದಂಪತಿ ನಡುವಿನ ಜಗಳ ಇಲ್ಲವೇ ಭೂವ್ಯಾಜ್ಯಗಳಲ್ಲಿ ಇಂಥ ಘಟನೆಗಳು ನಡೆಯುತ್ತಿರುತ್ತವೆ.

ಆದರೆ ಇಲ್ಲೊಂದು ಅಪರೂಪದ ಪ್ರಕರಣದಲ್ಲಿ 24 ವರ್ಷದ ಮಗಳು ತಂದೆಯ ವಿರುದ್ಧ ಕೋರ್ಟ್​ಗೆ ಹೋಗಿದ್ದಾಳೆ. ಅಪ್ಪನ ವಿರುದ್ಧ ಕೋರ್ಟ್​ ಮೆಟ್ಟಿಲೇರಿರುವುದು ದೊಡ್ಡ ವಿಷಯವಲ್ಲ, ಬದಲಿಗೆ ಅದಕ್ಕೆ ಕಾರಣ ಮಾತ್ರ ಬಲು ವಿಚಿತ್ರ.

ಅದೇನೆಂದರೆ, ಲುಡೋ ಆಟ ಆಡುವಾಗ ತಂದೆ ಮೋಸ ಮಾಡಿದ್ದಾನೆ ಎನ್ನುವುದು ಈ ಯುವತಿಯ ಅಳಲು! ಲುಡೊ ಗೇಮ್ ಆಡುವಾಗ ತಂದೆ ತನಗೆ ಮೋಸ ಮಾಡಿದ್ದು, ಇದರಿಂದ ಅವರು ಗೆದ್ದಿದ್ದಾರೆ. ಈ ನಿಟ್ಟಿನಲ್ಲಿ ತಂದೆಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಯುವತಿ ಕೋರ್ಟ್​ಗೆ ಸಲ್ಲಿಸಿರುವ ಅರ್ಜಿಯಲ್ಲಿ ಕೋರಿದ್ದಾಳೆ.

ಇನ್ನೂ ವಿಚಿತ್ರ ಎಂದರೆ, ತಂದೆ ಆಟದಲ್ಲಿ ಮಗಳಿಗೆ ಮೋಸ ಮಾಡಿಯೇ ಇಲ್ಲ. ಆದರೆ ತನ್ನ ಸಂತೋಷಕ್ಕಾಗಿ ತಂದೆ ತನ್ನನ್ನು ಗೆಲ್ಲಿಸಿ, ತಾನು ಸೋಲಬೇಕಿತ್ತು ಎನ್ನುವುದು ಈ ಯುವತಿಯ ಹೇಳಿಕೆ!

ಈ ಅರ್ಜಿಯನ್ನು ಪರಿಶೀಲಿಸಿರುವ ಕೋರ್ಟ್​, ತಂದೆ-ಮಗಳು ಇಬ್ಬರನ್ನೂ ಕೌನ್ಸೆಲಿಂಗ್​ಗೆ ಕಳುಹಿಸಿದೆ. ಈ ಕುರಿತು ಮಾಹಿತಿ ನೀಡಿರುವ ಭೂಪಾಲ್ ಕೌಟುಂಬಿಕ ನ್ಯಾಯಾಲಯದ ಕೌನ್ಸೆಲರ್ ಸರಿತಾ, ತಂದೆಯೊಂದಿಗೆ ಯುವತಿ ಲುಡೋ ಆಡುವಾಗ ತಂದೆ ಆಕೆಯ ಒಂದು ಕಾಯಿಯನ್ನು ಹೊಡೆದಿದ್ದಾರಂತೆ. ಇದರಿಂದಾಗಿ ತಂದೆ ತನಗೆ ಮೋಸ ಮಾಡಿದ್ದಾರೆ ಎನ್ನುವುದು ಯುವತಿಯ ದೂರು ಎಂದಿದ್ದಾರೆ.

ಜೀವನದಲ್ಲಿ ಎಲ್ಲ ರೀತಿಯ ಸಂತಸವನ್ನು ನೀಡಿದ್ದ ತಂದೆಯೇ ಈ ರೀತಿ ಮಾಡುತ್ತಾನೆ ಎಂದು ಯುವತಿ ನಂಬಿರಲಿಲ್ಲವಂತೆ. ಆದ್ದರಿಂದ ಈ ಘಟನೆಯ ನಂತರ ತನ್ನ ಮತ್ತು ತಂದೆಯ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಅವಳು ಹೇಳಲು ಆರಂಭಿಸಿದ್ದಾಳೆ. ಅಷ್ಟೇ ಅಲ್ಲದೇ, ತಂದೆಯ ಮೇಲಿದ್ದ ಗೌರವವನ್ನು ಕಳೆದುಕೊಂಡಿರುವ ಈಕೆ, ದ್ವೇಷ ಮಾಡಲು ಪ್ರಾರಂಭಿಸಿದ್ದಾಳೆ. ಆನಂತರ ತಂದೆಯನ್ನು ಡ್ಯಾಡಿ ಎಂದು ಕರೆಯುವುದನ್ನೇ ಬಿಟ್ಟಿದ್ದಾಳೆ ಎಂದು ಸರಿತಾ ಮಾಹಿತಿ ನೀಡಿದ್ದಾರೆ.

ಸದ್ಯ ನಾಲ್ಕು ಬಾರಿ ಕೌನ್ಸೆಲಿಂಗ್​ ಮಾಡಿ ಆಕೆಯ ಮನವೊಲಿಸಲು ಪ್ರಯತ್ನಿಸಲಾಗಿದೆ. ಆದರೆ ಆಕೆಗೆ ತನ್ನ ತಂದೆಯ ಕೃತ್ಯದಿಂದ ಎಷ್ಟು ಆಘಾತವಾಗಿದೆ ಎಂದರೆ ಇನ್ನೂ ತಂದೆಯನ್ನು ತಂದೆ ಎಂದು ಒಪ್ಪಿಕೊಳ್ಳಲು ಅವಳು ತಯಾರಿಲ್ಲ. ತನ್ನ ಸಂತೋಷಕ್ಕಾದರೂ ತಂದೆ ಸೋಲಬೇಕಿತ್ತು ಎಂದೇ ಪಟ್ಟುಹಿಡಿದು ಕುಳಿತಿದ್ದಾಳೆ. ಅದ್ಯ ಆಕೆಯ ಮನವೊಲಿಕೆಯ ಯತ್ನ ನಡೆದಿದೆ ಎಂದು ಕೌನ್ಸೆಲಿರ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net