ಲಸಿಕೆ ಖರೀದಿಗೆ ನಿಮ್ಮ ಬಳಿ ₹80 ಸಾವಿರ ಕೋಟಿ ಇದೆಯೆ? ಪೂನಾವಾಲಾ ಪ್ರಶ್ನೆ!

caccine
Published on

ನವದೆಹಲಿ: ಇನ್ನೊಂದು ವರ್ಷದಲ್ಲೇನಾದರೂ ಕರೊನಾ ಲಸಿಕೆ ಸಿದ್ಧಗೊಂಡದ್ದೇ ಆದರೆ, ಅದು ಪ್ರತಿಯೊಬ್ಬರಿಗೂ ತಲುಪಲು ಕೇಂದ್ರ ಬಳಿ 80 ಸಾವಿರ ಕೋಟಿ ರೂಪಾಯಿಗಳು ಸಿದ್ಧವಿದೆಯೆ ಎಂದು ಸೆರಮ್​ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್‌ಐಐ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದಾರ್​ ಪೂನವಾಲಾ ಪ್ರಶ್ನಿಸಿದ್ದಾರೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಸಂಭಾವ್ಯ ಕರೊನಾವೈರಸ್ ಲಸಿಕೆಯನ್ನು ಎಸ್​ಐಐ ಉತ್ಪಾದಿಸುತ್ತಿದೆ. ಈ ಸಂದರ್ಭದಲ್ಲಿ ಅವರು ಇಂಥದ್ದೊಂದು ಪ್ರಶ್ನೆಯನ್ನು ಕೇಂದ್ರದ ಮುಂದಿಟ್ಟಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅದಾರ್​, ಈ ಪ್ರಶ್ನೆ ಇರುವ ಟ್ವಿಟ್​ ಅನ್ನು ಪ್ರಧಾನ ಮಂತ್ರಿ ಕಚೇರಿಗೆ ಟ್ಯಾಗ್ ಮಾಡಿದ್ದಾರೆ.

ಇಡೀ ವಿಶ್ವದಲ್ಲೇ ಸೆರಂ ಅತಿ ಹೆಚ್ಚು ಲಸಿಕೆಗಳನ್ನು ತಯಾರಿಸುವ ಕಂಪನಿಯಾಗಿದೆ. ಒಂದು ವೇಳೆ ಲಸಿಕೆ ಸಿದ್ಧಗೊಂಡದ್ದೇ ಆದರೆ, ಆರೋಗ್ಯ ಸಚಿವಾಲಯವು ಲಸಿಕೆಯನ್ನು ಖರೀದಿಸಿ ಭಾರತದಲ್ಲಿ ವಿತರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರಿಗೂ ಇದು ತಲುಪಬೇಕು ಎಂದರೆ ಕನಿಷ್ಠ 80 ಸಾವಿರ ಕೋಟಿ ರೂಪಾಯಿಗಳ ಅಗತ್ಯವಿದೆ ಎಂದಿದ್ದಾರೆ ಅದಾರ್​.

"ನಾನು ಈ ಪ್ರಶ್ನೆಯನ್ನು ಕೇಳುತ್ತಿದ್ದೇನೆ. ಏಕೆಂದರೆ ಭಾರತ ಮತ್ತು ವಿದೇಶಗಳಲ್ಲಿ ಲಸಿಕೆ ತಯಾರಕರು ನಮ್ಮ ದೇಶದ ಅಗತ್ಯತೆ, ಸಂಗ್ರಹಣೆ ಮತ್ತು ವಿತರಣೆಯ ದೃಷ್ಟಿಯಿಂದ ಪೂರೈಸಲು ಯೋಜನೆ ಮತ್ತು ಮಾರ್ಗದರ್ಶನ ಮಾಡಬೇಕಾಗಿದೆ" ಎಂದು ಪೂನವಾಲಾ ಹೇಳಿದ್ದಾರೆ.

https://twitter.com/adarpoonawalla/status/1309788211447652352

ಬ್ರಿಟಿಷ್-ಸ್ವೀಡಿಷ್ ಫಾರ್ಮಾ ಕಂಪನಿ ಅಸ್ಟ್ರಾಜೆನೆಕಾ ಸಹಯೋಗದೊಂದಿಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಜೆನ್ನರ್ ಇನ್‌ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದ ಈ ಲಸಿಕೆಯನ್ನು ತಯಾರಿಸಲು ಎಸ್‌ಐಐ ಒಪ್ಪಂದಕ್ಕೆ ಸಹಿ ಹಾಕಿದೆ. ಭಾರತ ಸೇರಿದಂತೆ ಕಡಿಮೆ ಮತ್ತು ಮಧ್ಯಮ ಆರ್ಥಿಕತೆಯ ದೇಶಗಳಿಗೆ ಆಕ್ಸ್‌ಫರ್ಡ್ ಲಸಿಕೆ 3 ಡಾಲರ್‌ಗೆ (ಸುಮಾರು 221 ರೂಪಾಯಿ) ಲಭ್ಯವಾಗುವಂತೆ ಮಾಡುತ್ತೇವೆಂದು ಎಸ್‌ಐಐ ಈ ಹಿಂದೆ ಘೋಷಿಸಿತ್ತು.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಕೊವಿಶೀಲ್ಡ್ , ಆಸ್ಟ್ರಾಜೆನೆಕಾದ 2 ಮತ್ತು 3ನೇ ಹಂತಗಳ ಪ್ರಯೋಗವನ್ನು ಸೆರಂ ಸಂಸ್ಥೆ ನಡೆಸುತ್ತಿದೆ. ಇನ್ನು ಕೋವ್ಯಾಕ್ಸಿನ್ ಹಾಗೂ ಜೈಡಸ್ ಕ್ಯಾಡಿಲಾ ಎರಡು ಹಂತಗಳ ಪರೀಕ್ಷೆ ಮುಗಿಸಿದ್ದು, ಮೂರನೇ ಹಂತಕ್ಕೆ ಅನುಮತಿಗೆ ಕಾಯುತ್ತಿವೆ. ಒಂದೊಮ್ಮೆ ಕೊವಿಶೀಲ್ಡ್ ಲಸಿಕೆ ಲಭ್ಯವಾಗುತ್ತದೆ ಎಂದರೆ ಒಂದು ಲಸಿಕೆಗೆ 1 ಸಾವಿರ ರೂಪಾಯಿ ತಗುಲುತ್ತದೆ. ಪ್ರತಿ ತಿಂಗಳು 30 ಬಿಲಿಯನ್ ಡೋಸ್‌ಗಳ ಅಗತ್ಯವಿರುತ್ತದೆ. ಇಡೀ ದೇಶದ ಜನರನ್ನು ತಲುಪುವಷ್ಟರಲ್ಲಿ ಸುಮಾರು 2 ವರ್ಷ ಹಿಡಿಯಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net