More

    ವಿಚ್ಛೇದನಕ್ಕೆ ಒಪ್ಪಿದವಳು ಈಗ ಕೋರ್ಟ್​ಗೆ ಬರುತ್ತಲೇ ಇಲ್ಲ: ನನಗೇನು ಪರಿಹಾರವಿದೆ?

    ವಿಚ್ಛೇದನಕ್ಕೆ ಒಪ್ಪಿದವಳು ಈಗ ಕೋರ್ಟ್​ಗೆ ಬರುತ್ತಲೇ ಇಲ್ಲ: ನನಗೇನು ಪರಿಹಾರವಿದೆ? ಪ್ರಶ್ನೆ: ನನಗೆ ಮದುವೆಯಾಗಿ ಎಂಟು ವರ್ಷಗಳಾಗಿವೆ. ನನ್ನ ಹೆಂಡತಿ ನನ್ನನ್ನು ಬಿಟ್ಟು ಹೋಗಿ ಆರು ವರ್ಷಗಳಾಗಿವೆ. ಏನೇ ಪ್ರಯತ್ನ ಮಾಡಿದರೂ ಮತ್ತೆ ಬರಲಿಲ್ಲ. ಆಕೆಗೆ ಮತ್ತೊಬ್ಬ ವಿವಾಹಿತ ವ್ಯಕ್ತಿಯ ಜತೆ ಸಂಬಂಧ ಇರುವುದು ಎಲ್ಲರಿಗೂ ತಿಳಿಯಿತು. ಎಲ್ಲರೂ ಸೇರಿ ಒಬ್ಬರ ಮೇಲೆ ಒಬ್ಬರು ಹೇಳುವುದು ಬೇಡ, ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಹಾಕಿ ಎಂದು ಹೇಳಿದರು. ಹಾಗೆಯೇ ಹಾಕಿದ ಮೇಲೆ ನ್ಯಾಯಾಲಯದ ಮೂಲಕ ಸಂಧಾನದಲ್ಲೂ ವಿಚ್ಛೇದನಕ್ಕೆ ಒಪ್ಪಿಕೊಂಡಳು. ಆದರೆ ಆರು ತಿಂಗಳಾದ ಮೇಲೆ ಅವಳು ಕೋರ್ಟಿಗೆ ಬರಲೇ ಇಲ್ಲ. ಸುಮಾರು ಒಂದೂವರೆ ವರ್ಷ ಆದ ಮೇಲೆ ಕೇಸು ವಜಾ ಆಯಿತು. ಈಗ ನಾನು ಏನು ಮಾಡುವುದು ?
    ಅವಳು ನಾನು ಕೋರ್ಟಿಗೆ ಬರುವುದೇ ಇಲ್ಲ ಎನ್ನುತ್ತಾಳೆ. ನನ್ನ ಗತಿ ಏನು? ನನಗೆ ಕಾನೂನಿನಲ್ಲಿ ದಾರಿಯೇ ಇಲ್ಲವೇ?

    ಉತ್ತರ: ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಹಾಕುವ ಸಮಯದಲ್ಲಿ /ಪ್ರಕರಣ ದಾಖಲಿಸುವ ಸಮಯದಲ್ಲಿ ಮಾತ್ರ ವಿಚ್ಛೇದನಕ್ಕೆ ಇಬ್ಬರ ಒಪ್ಪಿಗೆ ಇದ್ದರೆ ಸಾಲದು. ನ್ಯಾಯಾಲಯ ವಿಚ್ಛೇದನದ ಆದೇಶ ಮಾಡುವ ದಿನದವರೆಗೂ ಒಪ್ಪಿಗೆ ಮುಂದುವರೆದಿರಬೇಕು. ಸಾಮಾನ್ಯವಾಗಿ ವಿಚ್ಛೇದನಕ್ಕೆ ದಾಖಲೆ ಸಲ್ಲಿಸಿದಾಗಲಿನಿಂದ ಹದಿನೆಂಟು ತಿಂಗಳ ಒಳಗೆ ವಿಚ್ಛೇದನದ ಆದೇಶವನ್ನು ನ್ಯಾಯಾಲಯ ಮಾಡುತ್ತದೆ.

    ಹಾಗೆ ಆದೇಶ ಮಾಡುವ ಮುಂಚೆ ದಂಪತಿಯಿಬ್ಬರಿಗೂ ವಿಚ್ಛೇದನ ಪಡೆಯುವ ಇಚ್ಚೆ ಇನ್ನೂ ಮುಂದುವರೆದಿದೆಯೇ ಎನ್ನುವುದನ್ನು ನ್ಯಾಯಾಲಯ ಖಚಿತ ಪಡಿಸಿಕೊಂಡೇ ಆದೇಶ ಮಾಡಬೇಕಾಗುತ್ತದೆ. ಆದರೆ ಪತಿ ಪತ್ನಿಯರಲ್ಲಿ ಒಬ್ಬರು ಪ್ರಕರಣ ದಾಖಲಿಸಿ ಆ ನಂತರ ನ್ಯಾಯಾಲಯಕ್ಕೆ ಬರದೇ ಹೋದರೆ ನ್ಯಾಯಾಲಯ ವಿಚ್ಛೇದನದ ಆದೇಶವನ್ನು ಮಾಡುವ ಹಾಗಿಲ್ಲ.

    ಈ ಆದೇಶದ ಮೇಲೆ ಅಪೀಲು ಹಾಕಿದರೂ ನಿಮಗೆ ವಿಚ್ಛೇದನದ ಆದೇಶ ಸಿಗದೇ ಹೋಗಬಹುದು. ಆದರೆ ಆ ನಂತರ ನೀವು ಸುಪ್ರೀಂ ಕೋರ್ಟಿಗೆ ಹೋದಾಗ ಸಂವಿಧಾನದ 142 ಪರಿಚ್ಛೇದದ ಕೆಳಗೆ ತಮ್ಮ ವಿಶಿಷ್ಟ ಅಧಿಕಾರವನ್ನು ಉಪಯೋಗಿಸಿ ಸುಪ್ರೀಂಕೋರ್ಟ್​ ಮಾತ್ರ ನಿಮಗೆ ವಿಚ್ಛೇದನದ ಆದೇಶವನ್ನು ಕೊಡಬಹುದು. ಈ ಬಗ್ಗೆ ಸುಪ್ರೀಂಕೋರ್ಟ್​ನ ಎ.ವಿ.ಜಿ.ವಿ.ರಾಮು ವಿರುದ್ಧ ಎ.ಎಸ್.ಆರ್ .ಭಾರತಿ (ಎ.ಐ.ಆರ್ 2018 ಎಸ್.ಸಿ.ಸಿ. ಪುಟ ಸಂಖ್ಯೆ 202) ಪ್ರಕರಣದಲ್ಲಿಯ ತೀರ್ಪು ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ಕೊಡುತ್ತದೆ.

    ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು [email protected] ಅಥವಾ [email protected] ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ  ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ vijayavani.net ಗೆ ಭೇಟಿ ಕೊಟ್ಟು ಅಂಕಣ ವಿಭಾಗದಲ್ಲಿ ನ್ಯಾಯದೇವತೆ ಸೆಕ್ಷನ್​ ಮೇಲೆ ಕ್ಲಿಕ್​ ಮಾಡಿ.

    ವಿಚ್ಛೇದನದ ಬಳಿಕ ಮರುಮದುವೆಯಾಗದಿದ್ದರೆ ಆಸ್ತಿಯಲ್ಲಿ ಪಾಲು ಸಿಗತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts