ಧರ್ಮಗುರುವಿನ ನಿಗೂಢ ಸಾವು; ಕೊಲೆಯೋ, ಆಕಸ್ಮಿಕವೋ ತನಿಖೆ ಶುರು

dharmaguru
Published on

ಭೋಪಾಲ್: ಇಲ್ಲಿಯ ಬೊಹ್ರಾ ಸಮಾಜದ ಧರ್ಮಗುರುವಿನ ನಿಗೂಢ ಸಾವು ಸಂಭವಿಸಿದ್ದು, ಇದು ಕೊಲೆಯೋ, ಆಕಸ್ಮಿಕವೋ ಎಂಬ ಗೊಂದಲ ಶುರುವಾಗಿದೆ.

ಮಧ್ಯ ಪ್ರದೇಶದ ಉಜೈನ್ ನಗರದ ನಾಗಾದದ 22 ವರ್ಷ ವಯಸ್ಸಿನ ಮುರ್ತುಜ ಮೃತರಾದವರು. ಇವರ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಮುರ್ತುಜಾ ಮೂಲತಃ ಖಂಡ್ವಾ ನಿವಾಸಿಯಾಗಿದ್ದರು.

ಒಂದು ವರ್ಷದಿಂದ ನಾಗಾದದಲ್ಲಿ ವಾಸವಾಗಿದ್ದರು. ಮಿರ್ಚಿ ಬಜಾರ್​ನಲ್ಲಿಯ ಜಾಬೀರ್ ಎಂಬವರ ಮನೆ ಬಾಡಿಗೆ ಪಡೆದುಕೊಂಡಿದ್ದ ಇವರು ಒಂಟಿಯಾಗಿ ವಾಸವಾಗಿದ್ದರು. ತಮ್ಮ ಸಮಾಜದ ಮಕ್ಕಳಿಗೆ ಧರ್ಮದ ಕುರಿತು ಶಿಕ್ಷಣ ನೀಡುವ ಕೆಲಸ ಮಾಡಿಕೊಂಡಿದ್ದರು.

ಇಂದು ಬೆಳಗ್ಗೆ ಮನೆ ಕೆಲಸದಾಕೆ ಬಂದಾಗ ಮೆಟ್ಟಿಲ ಬಳಿ ಧರ್ಮಗುರುವಿನ ಶವ ಕಂಡಿದೆ. ಕೂಡಲೇ ಆಕೆ ಪೊಲೀಸರಿಗೆ ವಿಷಯ ತಿಳಿಸಿದ್ದಾಳೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮುರ್ತುಜ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇದು ಕೊಲೆಯಾಗಿರುವ ಸಾಧ್ಯತೆ ಕಡಿಮೆ ಎಂದು ಮೇಲ್ನೋಟಕ್ಕೆ ಕಂಡುಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.

ಮೆಟ್ಟಿಲಿನಿಂದ ಕೆಳಗೆ ಇಳಿಯುವಾಗ ಆಯಕತಪ್ಪಿ ಬಿದ್ದಿದ್ದರಿಂದ ತಲೆ ಭಾಗದಲ್ಲಿ ಪೆಟ್ಟು ಆಗಿರುವ ಸಾಧ್ಯತೆ ಹೆಚ್ಚಿದೆ. ತಲೆ ಭಾಗದಲ್ಲಾದ ಗಾಯದಿಂದ ತೀವ್ರ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಅವರು ಮೃತಪಟ್ಟಿರಬಹುದು ಎಂದಿರುವ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net