

ಮುಂಬೈ: ತೌಕ್ತೆ ಚಂಡಮಾರುತ ದೇಶದ ವಿವಿಧ ರಾಜ್ಯಗಳಲ್ಲಿ ಭಾರಿ ಅನಾಹುತ ಸೃಷ್ಟಿ ಮಾಡಿವೆ. ಮುಂಬೈನಲ್ಲಿ ಇದೀಗ ಭಾರಿ ಗಾಳಿ- ಮಳೆ ಶುರುವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇದರ ನಡುವೆಯೇ ಬೀಸಿದ ಭಾರಿ ಗಾಳಿಗೆ ಮರವೊಂದು ಮುರಿದು ಬಿದಿದ್ದು, ಸ್ಥಳದಲ್ಲಿದ್ದ ಮಹಿಳೆ ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ನಡೆದಿದೆ.
ಭಾರಿ ಮಳೆ ಸುರಿಯುತ್ತಿದ್ದು, ಮಹಿಳೆಯೊಬ್ಬರು ಕೊಡೆ ಹಿಡಿದುಕೊಂಡು ಹೋಗುತ್ತಿದ್ದರು. ಅದೇ ಸ್ಥಳದಲ್ಲಿದ್ದ ಭಾರಿ ಗಾತ್ರದ ಮರವೊಂದು ಮುರಿದು ಬಿದ್ದಿದೆ. ಇನ್ನೇನು ಆ ಮರ ಆ ಮಹಿಳೆಯ ಮೇಲೆ ಬೀಳುವುದರಲ್ಲಿತ್ತು. ಆದರೆ ಆಕೆಯ ಅದೃಷ್ಟ ಚೆನ್ನಾಗಿತ್ತು. ತಕ್ಷಣ ಮಹಿಳೆ ಓಡಿ ಹೋಗಿದ್ದಾರೆ. ಇದರಿಂದ ಸಾವಿನ ದಡವೆಯಿಂದ ಪಾರಾಗಿದ್ದಾರೆ.
ಮುಂಬೈನಲ್ಲಿ ಸೋಮವಾರ 114 ಕಿ. ಮೀ. ವೇಗದಲ್ಲಿ ಗಾಳಿ ಬೀಸಿದೆ. ಸಮುದ್ರದ ಅಲೆಗಳ ಅಬ್ಬರವೂ ಜೋರಾಗಿದ್ದು, ಯಾರೂ ಸಹ ಸಮುದ್ರ ತೀರಕ್ಕೆ ಹೋಗಬಾರದು ಎಂದು ಶನಿವಾರದಿಂದಲೇ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಈ ದೃಶ್ಯ ಅಲ್ಲಿರುವ ಸಿಸಿಟಿವಿಯಲ್ಲಿ ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮುಂಬೈನ ಪಾಲ್‌ಘಾರ್‌ನ ಇಬ್ಬರು, ಥಾಣೆ ಪ್ರದೇಶದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.