

ಅವಳು ಈಗ ಒಂದು ವರ್ಷದಿಂದ ತವರಿನಲ್ಲೇ ಇದ್ದಾಳೆ. ಬೇರೆ ಮನೆಯನ್ನು ಅವರ ತಾಯಿಯ ಮನೆಯ ಹತ್ತಿರ ಮಾಡಿದರೆ ಮಾತ್ರ ಸಂಸಾರ ಮಾಡುತ್ತೇನೆ ಎನ್ನುತ್ತಾಳೆ. ನನ್ನ ಅಕ್ಕನ ಮೇಲೆ ಮತ್ತು ನನ್ನ ಗೆಳೆಯನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಾಳೆ. ನನ್ನ ಹೆಂಡತಿ ಉಪನ್ಯಾಸಕಳಾಗಿ ಕೆಲಸ ಮಾಡುತ್ತಿದ್ದಾಳೆ. ಅವಳು ಕಾಲೇಜು ಕೆಲಸ ಬಿಟ್ಟು , ಎಲ್ಲ ಕೆಟ್ಟ ಚಟಗಳನ್ನು ಬಿಟ್ಟರೆ , ನಮ್ಮ ಮನೆಗೆ ಬಂದರೆ, ನಾನು ಅವಳ ಜೊತೆ ಸಂಸಾರ ಮಾಡುತ್ತೇನೆ. ಈಗ ನಾನು ಏನು ಮಾಡಬೇಕು ಎಂದು ತಿಳಿಸಿ. ನಮ್ಮ ತಂದೆಯ ಒಂದು ಸ್ವಂತ ಮನೆ ಇದೆ, ಅದರಲ್ಲಿ ಅವಳಿಗೆ ಭಾಗ ಕೊಡಬೇಕೆ? ಒಂದು ವೇಳೆ ಡಿವೋರ್ಸ್ ಆದರೆ, ನಾನು ಅವಳಿಗೆ ಜೀವನಾಂಶ ಕೊಡಬೇಕೆ? ನನಗೆ ಕೆಲಸ ಇಲ್ಲ. ಜೀವನಾಂಶ ಕೊಡಬೇಕಾದರೆ ಎಷ್ಟು ಕೊಡಬೇಕಾಗಬಹುದು? ನನ್ನ ಹಂಡತಿ ಹೇಳುವುದೆಲ್ಲಾ ಸುಳ್ಳು ಎಂದು ನಾನು ಹೇಗೆ ಸಾಬೀತು ಮಾಡುವುದು?
ಉತ್ತರ: ನಿಮ್ಮ ತಂದೆಯ ಮನೆಯಲ್ಲಿ ನಿಮ್ಮ ಪತ್ನಿಗೆ ಭಾಗ ಕೇಳುವ ಹಕ್ಕು ಇರುವುದಿಲ್ಲ. ನೀವು ಹೆದರಬೇಕಾಗಿಲ್ಲ.
ನಿಮ್ಮ ಪತ್ನಿಗೇ ಕೆಲಸ ಇರುವುದರಿಂದ ನೀವು ಆಕೆಗೆ ಜೀವನಾಂಶ ಕೊಡಬೇಕಿರುವುದಿಲ್ಲ. ನಿಮ್ಮ ಮಗುವಿಗೆ ಜೀವನಾಂಶ ಕೇಳಿ , ನಿಮ್ಮ ಪತ್ನಿ ಅರ್ಜಿ ಹಾಕಿದರೆ, ಆಗ ಮಗುವಿಗೆ ತಿಂಗಳಿಗೆ ಎಷ್ಟು ಬೇಕಾಗಬಹುದು ಎನ್ನುವುದನ್ನು ನ್ಯಾಯಾಲಯ ನಿರ್ಧರಿಸುತ್ತದೆ. ಆ ನಂತರ, ಕೆಲಸದಲ್ಲಿ ಇರುವ ನಿಮ್ಮ ಪತ್ನಿ ಎಷ್ಟು ಕೊಡಬೇಕು, ಮತ್ತು ನೀವು ಎಷ್ಟು ಕೊಡಬೇಕು ಎನ್ನುವುದನ್ನು ನ್ಯಾಯಾಲಯ ನಿರ್ಧರಿಸುತ್ತದೆ.
ನ್ಯಾಯಾಲಯದಲ್ಲಿ ನಿಮ್ಮ ಪತ್ನಿ ಪ್ರಕರಣ ದಾಖಲಿಸಿದರೆ, ಆಕೆ ಮಾಡುವ ಆರೋಪಗಳನ್ನು ನೀವು ಅಲ್ಲಗಳೆದರೆ, ತಾನು ಮಾಡಿದೆ ಆರೋಪವನ್ನು ಸಾಬೀತು ಪಡಿಸುವ ಹೊಣೆಗಾರಿಕೆ ಆಕೆಯ ಮೇಲೆ ಇರುತ್ತದೆ. ಸುಳ್ಳು ಆಪಾದನೆಗಳನ್ನು ನ್ಯಾಯಾಲಯದಲ್ಲಿ ಸಾಬೀತು ಮಾಡಲು ಆಗುವುದಿಲ್ಲ. ಹೆದರಬೇಡಿ. ನಿಮ್ಮ ಹೆಂಡತಿ ಕೆಲಸ ಬಿಟ್ಟು ಬರಬೇಕು ಎಂದು ಕೇಳುವ ಅಧಿಕಾರ ನಿಮಗೆ ಇಲ್ಲ. ಆಕೆಯ ಚಾಳಿ ಕೆಟ್ಟದ್ದೋ ಅಲ್ಲವೋ ಎನ್ನುವುದನ್ನು ಒಂದೆರಡು ಘಟನೆಗಳಿಂದ, ನಿಮ್ಮ ಅನುಮಾನದಿಂದ ನಿರ್ಧರಿಸುವುದರಿಂದ ನಿಮಗೆ ಯಾವ ಪ್ರಯೋಜನವೂ ಆಗುವುದಿಲ್ಲ.
ಯಾವುದಕ್ಕೂ , ನೀವು ನಿಮ್ಮ ಪತ್ನಿ ಇರುವ ತಾಲ್ಲೂಕಿನ ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರಕ್ಕೆ ಅರ್ಜಿ ಕೊಟ್ಟು ನಿಮ್ಮಿಬ್ಬರ ಮಧ್ಯೆ ಇರುವ ದಾಂಪತ್ಯ ಸಮಸ್ಯೆಯನ್ನು ಪರಿಹರಿಸಿಕೊಡಿ ಎಂದು ಕೇಳಿಕೊಳ್ಳಿ. ಅಲ್ಲಿಗೆ ಇಬ್ಬರನ್ನೂ ಕರೆಯಿಸುತ್ತಾರೆ. ಅಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಬಹುದು.