ಅವನ ದೇಹ ಬೇಕು ಎಂದು ವರದಕ್ಷಿಣೆ ಕೇಸ್‌ ಧಮ್ಕಿ ಹಾಕ್ತಾಳೆ: ಏನು ಮಾಡಲಿ?

nandondukathe
ಪ್ರಾತಿನಿಧಿಕ ಚಿತ್ರ
Published on: 

ನನ್ನ ಮದುವೆಯಾಗಿ ಐದು ವರ್ಷಗಳಾಗಿವೆ. ಮೊದಲು ನಾಲ್ಕೈದು ತಿಂಗಳು ಮಾತ್ರ ಜತೆಗಿದ್ದ ಹೆಂಡತಿ, ತವರಿಗೆ ಹೋದವಳು ಬರಲೇ ಇಲ್ಲ. ಕೇಳಿದರೆ ‘ನನಗೆ ನೀನು ಇಷ್ಟ ಇಲ್ಲ . ಒತ್ತಾಯ ಮಾಡಿ ಕರೆದುಕೊಂಡು ಹೋದರೆ ಸಾಯುತ್ತೇನೆ’ ಅಂತ ಹೆದರಿಸುತ್ತಾಳೆ.

ಅವಳಿಗೆ ಬೇರೆಯವರ ಜೊತೆ ಅನೈತಿಕ ಸಂಬಂಧ ಇದೆ. ಅವನ ಜತೆಗಿನ ಸಂಬಂಧ ಬೇಕು ಅಂತಿದ್ದಾಳೆ. ಹಾಗಿದ್ದಮೇಲೆ ವಿಚ್ಛೇದನ ಕೊಡು ಅಂದರೆ ಅದಕ್ಕೂ ಒಪ್ಪುತ್ತಿಲ್ಲ. ಅವಳಿಗೆ ನಾನು ಗಂಡ ಆಗಿರಬೇಕು, ಆದರೆ ಡಿವೋರ್ಸ್‌ ಕೊಡಲ್ಲ. ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರುಕೊಟ್ಟರೆ ಅಲ್ಲಿಗೂ ಬರಲಿಲ್ಲ. ಈಗ ಸುಮ್ಮ ಸುಮ್ಮನೆ ವರದಕ್ಷಿಣೆ ಬೇಡಿಕೆ ಮಾಡಿದೆ ಎಂದು ಹೇಳಿ ಲಾಯರ್ ನೋಟಿಸ್ ಕೊಟ್ಟು ಧಮ್ಕಿ ಹಾಕಿದ್ದಾಳೆ. ನಾನು ಏನು ಮಾಡಬೇಕು ತಿಳಿಸಿ

ಉತ್ತರ:  ನೀವು ಮೊದಲಿಗೆ ಲಾಯರ್ ನೋಟಿಸಿಗೆ ಸರಿಯಾದ ಪ್ರತ್ಯುತ್ತರ ಕಳಿಸಿ.  ನಂತರ ನಿಮ್ಮ ತಾಲ್ಲೂಕಿನ ಮಧ್ಯಸ್ಥಿಕೆ ಕೇಂದ್ರಕ್ಕೆ ಹೋಗಿ, ನಿಮ್ಮ ಸಮಸ್ಯೆಯನ್ನು ಸಂಕ್ಷಿಪ್ತವಾಗಿ ಬರೆದು , ನಿಮ್ಮಿಬ್ಬರ ಮಧ್ಯೆ ವ್ಯಾಜ್ಯ ಪೂರ್ವ ಮಧ್ಯಸ್ಥಿಕೆಗೆ ವ್ಯವಸ್ಥೆ ಮಾಡಲು ಕೇಳಿಕೊಳ್ಳಿ. ಕೇಂದ್ರದವರು ಇಬ್ಬರನ್ನೂ ಕರೆಯಿಸಿ , ಮಧ್ಯಸ್ಥಿಕೆಗಾರರ ಮೂಲಕ ಮಾತಾಡಲು ಅವಕಾಶ ಮಾಡಿಕೊಡುತ್ತಾರೆ. ಆಗ ರಾಜೀ ಸೂತ್ರಕ್ಕೆ ಬರಬಹುದು.

ಒಂದು ವೇಳೆ ನಿಮ್ಮ ಪತ್ನಿ ಯಾವುದಕ್ಕೂ ಒಪ್ಪದಿದ್ದರೆ, ನಿಮಗೆ ಹಂಡತಿ ಬೇಕು ಎನ್ನುವುದಾದರೆ ಆಗ ನೀವು ಅವಳ ವಿರುದ್ಧ “ ದಾಂಪತ್ಯ ಜೀವನದ ಹಕ್ಕುಗಳ ಪುನರ್ ಸ್ಥಾಪನೆಗೆ” ಪ್ರಕರಣ ದಾಖಲಿಸಿ. ಅಥವಾ, ನಿಮಗೆ ಆಕೆಯಿಂದ ವಿಚ್ಛೇದನ ಬೇಕಿದ್ದರೆ, ವಿಚ್ಛೇದನಕ್ಕೆ ಪ್ರಕರಣ ದಾಖಲಿಸಿ.

ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ: