

ಲಖನೌ: ಕರೊನಾ ಲಸಿಕೆ ಹಾಕಿಸಿಕೊಳ್ಳುವುದನ್ನು ಹಲವು ಕಡೆಗಳಲ್ಲಿ ಕಡ್ಡಾಯ ಮಾಡಲಾಗಿದೆ. ಆದರೆ ಮದ್ಯ ಸೇವನೆಗೂ ಕಡ್ಡಾಯ ಮಾಡಿ ಅಪರೂಪದ ಸೂಚನೆ ನೀಡಿದೆ ಒಂದು ವೈನ್‌ಷಾಪ್!
ಅತ್ತ ದೆಹಲಿಯಲ್ಲಿ ಮದ್ಯಪ್ರಿಯರಿಗೆ ಮನೆಬಾಗಿಲಿಗೇ ಮದ್ಯಪೂರೈಸುವ ಅವಕಾಶವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೀಡಿ ಆದೇಶ ಹೊರಡಿಸಿದರೆ, ಇತ್ತ ಉತ್ತರ ಪ್ರದೇಶದ ಏಥವಾ ಜಿಲ್ಲೆಯಲ್ಲಿರುವ ಕೆಲ ಮದ್ಯದ ಅಂಗಡಿಗಳಿಗೆ ಕರೊನಾ ವಾಕ್ಸಿನೇಟಷನ್ ಸರ್ಟಿಫಿಕೇಟ್ ಕಡ್ಡಾಯ ಮಾಡಲಾಗಿದೆ.
ಮೊಬೈಲ್ ಆ್ಯಪ್ ಮತ್ತು ಆನ್‌ಲೈನ ಮೂಲಕ ಬುಕ್ ಮಾಡಿದರೆ ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡಲಾಗುವುದು ಎಂದು ದೆಹಲಿ ಸರ್ಕಾರ ಹೇಳಿದ್ದು, ಯಾವುದೇ ಕಾರಣಕ್ಕೂ ಲಸಿಕೆ ಸರ್ಟಿಫಿಕೇಟ್ ಇಲ್ಲದಿದ್ರೆ ಮದ್ಯ ಕೊಡಲ್ಲ ಎಂದು ಉತ್ತರ ಪ್ರದೇಶದ ಕೆಲ ಮದ್ಯದ ಅಂಗಡಿಗಳು ಹೇಳಿವೆ.
ಈ ಕುರಿತು ಮಾಹಿತಿ ನೀಡಿರುವ ಏಥವಾ ಜಿಲ್ಲೆಯ ಪ್ರಸಿದ್ಧ ಮದ್ಯದಂಗಡಿ ಮಾಲೀಕ ಸೈಫೈ ಅವರು, ಲಸಿಕೆಯನ್ನು ನಾವು ಕೆಲವರು ಕಡ್ಡಾಯ ಮಾಡಿದ್ದೇವೆ. ಇಲ್ಲದಿದ್ದರೆ ಮದ್ಯ ಕುಡಿದು ಎಡವಟ್ಟಾದರೆ ನಮಗೆ ಕೆಟ್ಟ ಹೆಸರು ಬರುತ್ತದೆ ಎಂದಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ ಎಂಬ ಬಗ್ಗೆ ಅಂಗಡಿ ಎದುರು ಪೋಸ್ಟರ್ ಹಾಕಿದ್ದು, ಅದೀಗ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.