

ಚೆನ್ನೈ: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಹುಟ್ಟುಹಬ್ಬ ಆಚರಣೆ ವೇಳೆಗೆ ಗನ್ನಿಂದ ಕೇಕ್ ಕತ್ತರಿಸಿದ ಕಾರಣಕ್ಕೆ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿ ಕ್ರಮ ತೆಗೆದುಕೊಂಡಿದ್ದಾರೆ. ಅದೇ ಇನ್ನೊಂದೆಡೆ ತಮಿಳು ನಟ ವಿಜಯ್ ಸೇತುಪತಿ ತಲ್ವಾರ್ನಿಂದ ಕೇಕ್ ಕತ್ತರಿಸಿ ಇದೀಗ ಛೀಮಾರಿಗೆ ಗುರಿಯಾಗಿದ್ದಾರೆ.
ತಾವು ಮಾಡಿರುವ ಘನಕಾರ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ ಹಾಪುರ್ದ ಯುವಕರು ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದರು. ಕೂಡಲೇ ಅವರನ್ನು ಬಂಧಿಸಲಾಗಿದೆ. ಅದೇ ರೀತಿ ಇತ್ತ ನಟ ವಿಜಯ್ ಕೂಡ ತಲ್ವಾರ್ ನಿಂದ ಕೇಕ್ ಕತ್ತರಿಸಿ ಸಂಭ್ರಮಿಸಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕೆಲವು ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಹಾಡಿ ಕೊಂಡಾಡಿದ್ದರೆ, ಹಲವರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿನಿಮಾ ತಾರೆಯರಿಗೆ ಅಭಿಮಾನಿಗಳು ಹೆಚ್ಚು. ತಮ್ಮ ನೆಚ್ಚಿನ ನಟರು ಮಾಡುವುದಕ್ಕೇ ಅನುಸರಿಸಿ ಅಪರಾಧ ಕೃತ್ಯಕ್ಕೆ ಇಳಿಯುತ್ತಿರುವವರು ಅದೆಷ್ಟೋ ಮಂದಿ. ಅಂಥದ್ದರ ನಡುವೆ ಇಂಥದ್ದೊಂದು ಕೆಲಸ ಮಾಡಿರುವುದು ಅತ್ಯಂತ ದುರದೃಷ್ಟಕರ ಎಂದು ಕಮೆಂಟಿಗರು ನಟನಿಗೆ ಛೀಮಾರಿ ಹಾಕಲು ಶುರು ಮಾಡಿದ್ದಾರೆ.
ಕಮೆಂಟ್ಗಳನ್ನು ನೋಡಿದ ನಂತರ ಈ ನಟನಿಗೆ ಜ್ಞಾನೋದಯವಾಗಿದೆ. ನಂತರ ಜನತೆಯಲ್ಲಿ ಅವರು ಕ್ಷಮೆ ಕೋರಿದ್ದಾರೆ. ಸುದೀರ್ಘ ಪತ್ರ ಬರೆದು ಕ್ಷಮೆ ಕೋರಿರುವ ನಟ ವಿಜಯ್, ಓರ್ವ ನಟನಾಗಿ ಮಾದರಿಯಾಗಬೇಕಿದ್ದ ನಾನು ಕೆಟ್ಟ ಉದಾಹರಣೆಯಾದಂತಾಗಿದೆ. ಇನ್ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸುವುದಾಗಿ ತಿಳಿಸಿದ್ದಾರೆ.