

ಲಖನೌ: ಕೆಲವರಿಗೆ ಎಂತೆಂಥದ್ದೋ ಕ್ರೇಜ್ಗಳು ಇರುತ್ತವೆ. ಇದೇ ಹುಚ್ಚಿನಿಂದಾಗಿ ಕೆಲವೊಮ್ಮೆ ಅಪಾಯಕಾರಿ ಎನ್ನುವಂತ ಸಾಹಸಕ್ಕೆ ಕೈಹಾಕುವುದೂ ಇದೆ. ಇನ್ನು ಕೆಲವರು ಅಧಿಕಾರ, ಹಣದ ದರ್ಪದಿಂದ ತೀರಾ ಹುಚ್ಚು ಎನಿಸುವ ಕಾರ್ಯಕ್ಕೆ ಕೈಹಾಕಿ, ದೊಡ್ಡ ಹೆಸರು ಮಾಡುವ ತವಕದಲ್ಲಿ ಇರುತ್ತಾರೆ.
ಇಂಥದ್ದೇ ಹುಚ್ಚು ಸಾಹಸಕ್ಕೆ ಕೈಹಾಕಿರುವ ಇಬ್ಬರು ವ್ಯಕ್ತಿಗಳು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಡಿಫರೆಂಟ್ ಆಗಿ ಹುಟ್ಟುಹಬ್ಬ ಆಚರಿಸಲು ಹೋಗಿರುವುದೇ ಈ ಯುವಕರಿಗೆ ಮುಳುವಾಗಿದೆ. ವಿಚಿತ್ರ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿದ್ದರೆ ಏನಾಗುತ್ತಿರಲಿಲ್ಲವೇನೋ, ತಾವು ಮಾಡಿರುವ ಈ ಸಾಹಸ ಕಾರ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಇದೀಗ ಪೊಲೀಸರ ಕೈಗೆ ಸಿಕ್ಕುಬಿದ್ದಿದ್ದಾರೆ.
ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಜ.10ರಂದು ನಡೆದಿರುವ ಹುಟ್ಟುಹಬ್ಬದ ಘಟನೆ ಇದಾಗಿದೆ. ಅಷ್ಟಕ್ಕೂ ಈ ಯುವಕರು ಮಾಡಿದ್ದೇನೆಂದರೆ ಗನ್ ಬಳಸಿ ಕೇಕ್ ಕಟ್ ಮಾಡಿದ್ದಾರೆ!
ವೈರಲ್ ಆಗಿರುವ ವಿಡಿಯೋ ನೀವೂ ನೋಡಿ:
ಎಲ್ಲರಿಗಿಂತಲೂ ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಎಲ್ಲರೂ ತಮಗೆ ಶಹಬ್ಬಾಸ್ಗಿರಿ ಕೊಡಲಿ ಎನ್ನುವ ಕಾರಣಕ್ಕೆ ಶಹನವಾಜ್ ಎಂಬ ಯುವಕ ಗನ್ನಿಂದ ಕೇಕ್ ಕಟ್ ಮಾಡಿದ್ದಾನೆ. ಇದಕ್ಕೆ ಆತನ ಸ್ನೇಹಿತ ಶಕೀಬ್ ಸಾಥ್ ನೀಡಿದ್ದಾರೆ.
ಇಷ್ಟು ಮಾಡಿ ಕುಣಿದು ಕುಪ್ಪಳಿಸಿ ಅದನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದನ್ನು ನೋಡಿದ ಪೊಲೀಸರು ಈ ಯುವಕರ ಬಳಿ ಗನ್ ಬಂದದ್ದು ಹೇಗೆ ಎಂದು ತನಿಖೆ ಕೈಗೊಂಡಿದ್ದಾರೆ. ಈ ರೀತಿ ಜೀವಂತ ಗುಂಡುಗಳನ್ನು ಇಟ್ಟುಕೊಂಡು ಗನ್ನಿಂದ ನಿಯಮ ಉಲ್ಲಂಘಿಸಿ ಶೂಟ್ ಮಾಡಿರುವ ಕಾರಣ, ಇಬ್ಬರೂ ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಗನ್ ಹಾಗೂ ಜೀವಂತ ಗುಂಡ ವಶಕ್ಕೆ ಪಡೆದಿರುವ ಪೊಲೀಸರು ಈ ಕುರಿತು ತನಿಖೆ ಕೈಗೊಂಡಿದ್ದಾರೆ. 20 ಸೆಕೆಂಡ್ಗಳ ವಿಡಿಯೋದಿಂದ ಇದೀಗ ಈ ಯುವಕರು ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ.