ಮಂಡ್ಯದಲ್ಲಿ ಜೆಡಿಎಸ್​ಗೆ ಶಾಕ್​ ಕೊಟ್ಟ ಮಾಜಿ ಕಂದಾಯ ಅಧಿಕಾರಿ: ಬಿಜೆಪಿಗೆ ಸೇರ್ಪಡೆ

lakshmi
Published on

ಮಂಡ್ಯ: ಬಿಜೆಪಿಯ ಸಿದ್ಧಾಂತಗಳಿಗೆ ಒಲಿದು ಅಥವಾ ಕೆಲವು ವೈಯಕ್ತಿಯ ಕಾರಣಗಳಿಂದ ತಮ್ಮ ಪಕ್ಷವನ್ನು ತೊರೆದು ಈ ಪಕ್ಷವನ್ನು ಸೇರುವ ಅಧಿಕಾರಿಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಕರ್ನಾಟಕದ ಸಿಂಗಂ ಎಂದೇ ಖ್ಯಾತಿ ಪಡೆದಿದ್ದ ಐಪಿಎಸ್​ ಅಧಿಕಾರಿ ಅಣ್ಣಾಮಲೈ ಅವರು, ಹುದ್ದೆಯನ್ನು ತೊರೆದು ಬಿಜೆಪಿ ಸೇರಿ ಸುದ್ದಿಯಾಗಿದ್ದರೆ, ಇದೀಗ ಭಾರತೀಯ ಕಂದಾಯ ಸೇವೆ (ಐಆರ್​ಎಸ್) ಅಧಿಕಾರಿಯಾಗಿದ್ದ ಜೆಡಿಎಸ್​ನಲ್ಲಿ ಗುರುತಿಸಿಕೊಂಡಿರುವ ಲಕ್ಷ್ಮಿ ಅಶ್ವಿನ್​ ಗೌಡ್​ ಬಿಜೆಪಿ ಸೇರಲು ಸನ್ನದ್ಧರಾಗಿದ್ದಾರೆ.

ನಿನ್ನೆಯಷ್ಟೇ ಜೆಡಿಎಸ್​ ತೊರೆದಿರುವ ಲಕ್ಷ್ಮಿ ಅವರು ಇಂದು ಅಧಿಕೃತವಾಗಿ ಬಿಜೆಪಿ ಸೇರಬೇಕಿತ್ತು. ಆದರೆ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರ ಕಾರ್ಯಕ್ರಮ ಇರುವ ಹಿನ್ನೆಲೆಯಲ್ಲಿ ಬಿಜೆಪಿ ಸೇರ್ಪಡೆಯ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ವರದಿಯಾಗಿದೆ.

ಜೆಡಿಎಸ್​ ಪಕ್ಷದ ವರಿಷ್ಠರ ಮಾತು ನಂಬಿ ಉನ್ನತ ಹುದ್ದೆ ತ್ಯಜಿಸಿ ಬಂದಿದ್ದ ಲಕ್ಷ್ಮಿ ಅವರನ್ನು ಪಕ್ಷ ಕಡೆಗಣಿಸಿದ್ದೇ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಲಕ್ಷ್ಮಿ ಅವರಿಗೆ ತಮ್ಮ ಪಕ್ಷದಿಂದ ಟಿಕೆಟ್​ ನೀಡುವುದಾಗಿ ಜೆಡಿಎಸ್​ ಎರಡು ಬಾರಿ ಆಶ್ವಾಸನೆ ನೀಡಿದ್ದರೂ, ಆ ರೀತಿ ನಡೆಸಿಕೊಂಡಿರಲಿಲ್ಲ. ನಾಗಮಂಗಲ ವಿಧಾನಸಭಾ ಬಳಿಕ ಲೋಕಸಭಾದಿಂದ ಕಣಕ್ಕೆ ಇಳಿಸುವ ಆಶ್ವಾಸನೆ ನೀಡಿದ್ದರೂ ಪಕ್ಷ ಅದನ್ನು ಈಡೇರಿಸಿರಲಿಲ್ಲ.

ಲಕ್ಷ್ಮಿ ಅವರ ಜತೆಗೆ ಅಕ್ಷಯ ಗೋಲ್ಡ್ ಸಂಸ್ಥೆಯ ಮಾಲೀಕರಾದ ಸತೀಶ್ ಕೂಡ ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ.

ಮಂಡ್ಯದ ಮಳವಳ್ಳಿ ತಾಲೂಕಿನ ನಿಟ್ಟೂರಿನ ಕೋಡಹಳ್ಳಿ ಗ್ರಾಮದ ಲಕ್ಷ್ಮಿ ಅಶ್ವಿನಿ ಗೌಡ ಎಂಬಿಬಿಎಸ್​ ಪದವೀಧರೆ. 2013ರಲ್ಲಿ ಯುಪಿಎಸ್​ಸಿ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿಸಿ, 2015ರಲ್ಲಿ ಐಆರ್​ಎಸ್​ ಅಧಿಕಾರಿಯಾದರು. ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳ ಬದುಕು ಸುಧಾರಿಸಬೇಕೆಂಬ ಉದ್ದೇಶದಿಂದ ಹಾಗೂ ಜೆಡಿಎಸ್​ ವರಿಷ್ಠರ ಆಶ್ವಾಸನೆಯಿಂದ 2017ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net