

ನೈನಿತಾಲ್ (ಉತ್ತರಾಖಂಡ): ಸುಮ್ಮನೇ ಕಾಳಿಂಗ ಸರ್ಪವನ್ನು ನೆನೆಸಿಕೊಂಡರೇನೇ ಮೈಯೆಲ್ಲಾ ಝುಂ ಎನಿಸುತ್ತದೆಯಲ್ಲವೆ? ಅಂಥದ್ದೊಂದು ಭಯಾನಕ ಎನಿಸುವ ಸರ್ಪ ನಿಮ್ಮ ಎದುರಿಗೆ ಬಂದು ಬಿಟ್ಟರೆ? ಹೋಗಲಿ ಮನೆಯೊಳಕ್ಕೆ ಬಂದುಬಿಟ್ಟರೆ...?
ಅಬ್ಬಾ... ದಯವಿಟ್ಟು ಇಂಥದ್ದೆಲ್ಲಾ ಕಲ್ಪನೆ ಮಾಡಿಕೊಳ್ಳಲೂ ಹೇಳಬೇಡಿ ಎಂದು ಉದ್ಗರಿಸುವವರೇ ಹೆಚ್ಚು.
ಆದರೆ ನಿಜವಾಗಿಯೂ ಅಂಥದ್ದೊಂದು ಘಟನೆ ಉತ್ತರಾಖಂಡದ ನೈನಿತಾಲ್‌ನ ಮನೆಯೊಂದರಲ್ಲಿ ನಡೆದಿದೆ. ಕಾಳಿಂಗ ಸರ್ಪ ಸೀದಾ ಹೋಗಿ ಮಂಚದ ಅಡಿಗೆ ಅಡಗಿ ಕುಳಿತಿದೆ.
ಈ ಮನೆಯವರು ಅದನ್ನು ನೋಡಿದ ತಕ್ಷಣ ಅರಣ್ಯ ಇಲಾಖೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಇಲಾಖೆ ಕ್ಷಿಪ್ರ ಕಾರ್ಯ ಪಡೆಯನ್ನು ಈ ಮನೆಗೆ ಕಳುಹಿಸಲಾಯಿತು. ಹಾವು ಹಿಡಿಯುವ ತಜ್ಞನೊಬ್ಬ ಸರ್ಪವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ನಂತರ ಈ ಹಾವನ್ನು ಕಾಡಿನೊಳಕ್ಕೆ ಬಿಟ್ಟು ಬರಲಾಗಿದೆ. ಅರಣ್ಯಾಧಿಕಾರಿ ಅಕಾಶ್ ಕುಮಾರ್ ವರ್ಮಾ ತಮ್ಮ ಟ್ವೀಟರ್ ಖಾತೆಯಲ್ಲಿ ಹಾವು ಹಿಡಿಯುವುದರಿಂದ ಅದನ್ನು ಕಾಡಿಗೆ ಬಿಟ್ಟು ಬರುವವರೆಗಿನ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಈ ಮೈ ಝುಂ ಎನಿಸುವ ವಿಡಿಯೋ ಇದೀಗ ಭಾರಿ ವೈರಲ್ ಆಗಿದ್ದು, ಸಾವಿರಾರು ಮಂದಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.