ಚೀನಾದ ಈ ಯುವತಿಗೆ ಸಿಕ್ಕಿತು ಆಸ್ಕರ್‌ ಪ್ರಶಸ್ತಿ: ಏಷ್ಯಾದ ಮೊದಲ ಅತ್ಯುತ್ತಮ ಮಹಿಳಾ ನಿರ್ದೇಶಕಿಯೆಂಬ ಖ್ಯಾತಿ...

oscor
Published on

ಲಾಸ್‌ ಏಂಜಲೀಸ್‌: ಅಮೆರಿಕದ ಲಾಲ್‌ ಏಂಜಲೀಸ್‌ನಲ್ಲಿ ಭಾರತೀಯ ಕಾಲಮಾನದ ನಸುಕಿನ 5.30ರ ವೇಳೆಗೆ ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ಇದರಲ್ಲಿ ಚೀನಾದ ಯುವತಿಗೆ ಆಸ್ಕರ್‌ ಪ್ರಶಸ್ತಿ ಲಭಿಸಿದೆ.

93ನೇ ಆಸ್ಕರ್​ ಪ್ರಶಸ್ತಿಗೆ ಕ್ಲೋಯಿ ಜಾವ್​ ಭಾಜನರಾಗಿದ್ದಾರೆ. ಇವರ ನೋಮಡ್​ಲ್ಯಾಂಡ್​ ಚಿತ್ರದ ನಿರ್ದೇಶನಕ್ಕಾಗಿ 'ಅತ್ಯುತ್ತಮ ನಿರ್ದೇಶಕಿ' ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಮೂಲಕ ಆಸ್ಕರ್​ನಲ್ಲಿ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಪಡೆದ ಏಷ್ಯಾದ ಮೊದಲ ಮಹಿಳೆ ಎಂಬ ಹೆಮ್ಮೆ ಕ್ಲೋಯಿ ಅವರದ್ದು.

ಆಸ್ಕರ್​ ಇತಿಹಾಸದಲ್ಲಿ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಪಡೆದ ಎರಡನೇ ಮಹಿಳೆಯಾಗಿಯೂ ಇವರು ಹೊರಹೊಮ್ಮಿದ್ದಾರೆ. ಡೆನ್ಮಾರ್ಕ್​ನ 'ಅನದರ್​ ರೌಂಡ್​' ಸಿನಿಮಾಗೆ ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್​ ಫಿಲ್ಮ್​ ಗೌರವ ಸಿಕ್ಕಿದೆ. ಕನ್ನಡದ ಜಲ್ಲಿಕಟ್ಟು ಸಿನಿಮಾ ಕೂಡ ಈ ಪ್ರಶಸ್ತಿಗೆ ಪ್ರವೇಶ ಪಡೆದಿತ್ತು. ಆದರೆ ಅಂತಿಮ ಸುತ್ತಿಗೆ ನಾಮನಿರ್ದೇಶನಗೊಳ್ಳುವಲ್ಲಿ ಇದು ವಿಫಲವಾಗಿದೆ.

'ಪ್ರಾಮಿಸಿಂಗ್​ ಎಂಗ್​ ವುಮನ್'​ ಚಿತ್ರಕ್ಕೆ ಎಮೆರಲ್ಡ್​ ಫೆನಲ್​ ಅವರಿಗೆ ಬೆಸ್ಟ್​ ಒರಿಜಿನಲ್​ ಸ್ಕ್ರೀನ್​ಪ್ಲೇ ಪ್ರಶಸ್ತಿ ಬಂದಿದೆ. ಜೂಡಸ್​ ಆ್ಯಂಡ್‌ ಬ್ಲ್ಯಾಕ್‌ ಮೇಷಿಯಾ ಚಿತ್ರದ ನಟನೆಗಾಗಿ ಡ್ಯಾನಿಯಲ್​ ಕಲೂಯಾ ಅವರು ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ.

'ಮಿನಾರಿ' ಸಿನಿಮಾದಲ್ಲಿ ನಟಿಸಿರುವ 73ರ ಪ್ರಾಯದ ಯು ಜಂಗ್​ ಯಾನ್​ ಅವರಿಗೆ ಅತ್ತುತ್ತಮ ಪೋಷಕ ನಟಿ ಪ್ರಶಸ್ತಿ ಸಿಕ್ಕಿದೆ. ಟೆನೆಟ್​ ಚಿತ್ರಕ್ಕೆ ಅತ್ಯುತ್ತಮ ವಿಷ್ಯುವಲ್‌ ಎಫೆಕ್ಟ್​ ಪ್ರಶಸ್ತಿ ಸಿಕ್ಕಿದ್ದು, ಅತ್ಯುತ್ತಮ ಧ್ವನಿ ವಿನ್ಯಾಸ ಮತ್ತು ಅತ್ಯುತ್ತಮ ಸಂಕಲನ ಪ್ರಶಸ್ತಿಯನ್ನು 'ಸೌಂಡ್​ ಆಫ್​ ಮೆಟಲ್​' ಚಿತ್ರ ಬಾಚಿಕೊಂಡಿದೆ. ಅತ್ಯುತ್ತಮ ಕೇಶವಿನ್ಯಾಸ ಹಾಗೂ ಅತ್ಯುತ್ತಮ ಮೇಕಪ್​ ವಿಭಾಗದಲ್ಲಿ 'ಮಾ ರೇನೀಸ್​ ಬ್ಲ್ಯಾಕ್​ ಬಾಟಮ್​' ಚಿತ್ರ ಪ್ರಶಸ್ತಿ ಪಡೆದಿದ್ದರೆ ಅತ್ಯುತ್ತಮ ಛಾಯಾಗ್ರಹಣ ಮತ್ತು ಅತ್ಯುತ್ತಮ ನಿರ್ಮಾಣ ವಿನ್ಯಾಸ ಪ್ರಶಸ್ತಿ ಮಾಂಕ್​ ಚಿತ್ರಕ್ಕೆ ಸಿಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net