ನನ್ನ ಸ್ನೇಹಿತೆಯಾಗಿರು ಎನ್ನುತ್ತಿದ್ದರು, ಅದೇನೆಂದು ಅರ್ಥವಾದಾಗ ಶಾಕ್​ ಆದೆ: ನಟಿ ತೆರೆದಿಟ್ಟ ಕರಾಳ ಅನುಭವ

shama
Published on

ಮುಂಬೈ: ಸಿನಿಮಾ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆಯಲು ನಟಿಯರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯಗಳ ಕುರಿತ ಕಾಸ್ಟ್​ ಕೌಂಚಿಂಗ್​ ಬಗ್ಗೆ ಇದಾಗಲೇ ಸಾಕಷ್ಟು ನಟಿಯರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇದರ ಕುರಿತು 2018ರಲ್ಲಿ ನಟಿ ಶ್ರುತಿ ಹರಿಹರನ್​ ಮಾತನಾಡಿದ್ದಾಗ, 'ಮೀ ಟೂ' ಹೆಸರಿನಲ್ಲಿ ಭಾರಿ ಅಭಿಯಾನವೇ ಶುರುವಾಗಿತ್ತು.

ಇದೀಗ ಬಾಲಿವುಡ್​ನ ಖ್ಯಾತ ನಟಿ ಶಮಾ ಸಿಕಂದರ್ ಕೂಡ ತಮಗಾಗಿರುವ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಮೊನ್ನೆಯಷ್ಟೇ ಸ್ಯಾಂಡಲ್​ವುಡ್​ ನಟಿ ಆಶಿತಾ ತಮಗಾಗಿದ್ದ ಕಹಿ ಅನುಭವ ಹಂಚಿಕೊಂಡಿದ್ದರು. ಇದೀಗ ಬಾಲಿವುಡ್​ನಲ್ಲಿ ನೆಲೆ ನಿಲ್ಲಲು ತಾವು ಅನುಭವಿಸಿರುವ ಲೈಂಗಿಕ ಕಿರುಕುಳಗಳ ಬಗ್ಗೆ ಶಮಾ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಕಿರುತೆರೆಯಲ್ಲಿ ಖ್ಯಾತಿ ಪಡೆದ ಬಳಿಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿರೋ ಶಮಾ ಸಿಕಂದರ್ ತಮ್ಮನ್ನು ನಿರ್ಮಾಪಕರು ನಡೆಸಿಕೊಂಡಿರುವ ರೀತಿಯ ಕುರಿತು ವಿವರಿಸಿದ್ದಾರೆ. `ಯೇ ಮೇರಿ ಲೈಫ್ ಹೈ’ ಚಿತ್ರದ ಮೂಲಕ ಬಹಳಷ್ಟು ಖ್ಯಾತಿ ಪಡೆದ ನಟಿ ಕರಾಳ ಅನುಭವಗಳನ್ನು ತೆರೆದಿಟ್ಟಿದ್ದಾರೆ.

'ನಾನು ಪಾತ್ರಗಳ ಹುಡುಕಾಟದಲ್ಲಿದ್ದರೆ ನಿರ್ಮಾಪಕರು ನನ್ನಿಂದ ಬಯಸುತ್ತಿದ್ದುದೇ ಬೇರೆ, ನನ್ನ ಮೇಲೆ ಅವರ ದೃಷ್ಟಿಕೋನವೇ ಬದಲಾಗಿತ್ತು. ನನ್ನನ್ನು ಅವರು ನಡೆಸಿಕೊಂಡ ರೀತಿ ಅಸಹ್ಯ ಹುಟ್ಟಿಸುವಂಥದ್ದು' ಎಂದಿದ್ದಾರೆ ಶಮಾ. 'ನೀನು ನನ್ನ ಸ್ನೇಹಿತೆಯಾಗಿರು ಎಂದು ಕೆಲ ನಿರ್ಮಾಪಕರು ಹೇಳಿದ್ದರು. ಸ್ನೇಹಿತೆ ಎಂಬುದು ಅವರ ಅರ್ಥದಲ್ಲಿ ಬೇರೆಯದ್ದೇ ಆಗಿತ್ತು. ಕೆಲವರಂತೂ ನೇರವಾಗಿ ಲೈಂಗಿಕ ಆಸೆಯನ್ನು ವ್ಯಕ್ತಪಡಿಸಿದ್ದರು' ಎಂದ ನಟಿ, 'ಯಾವುದೇ ಚಿತ್ರ ಮಾಡದೇ ನಾನು ಸ್ನೇಹಿತೆಯಾಗಿರಲು ಹೇಗೆ ಸಾಧ್ಯ ಎನ್ನುವುದೇ ನನಗೆ ಅರ್ಥವಾಗಿರಲಿಲ್ಲ, ಕೊನೆಕೊನೆಗೆ ಅವರು ನನ್ನನ್ನು ನೋಡುತ್ತಿದ್ದ ದೃಷ್ಟಿ ಹಾಗೂ ಅವರ ಮಾತುಗಳಿಂದ ಅವರ ಆಸೆ ಏನೆಂದು ತಿಳಿಯಿತು. ಅವರು ನನ್ನ ದೇಹ ಸಂಪರ್ಕ ಬಯಸುತ್ತಿದ್ದಾರೆ ಎಂಬುದು ಅರ್ಥವಾಯಿತು' ಎಂದಿದ್ದಾರೆ.

ಬಾಲಿವುಡ್‌ನಲ್ಲಿ ಮಾತ್ರ ಕಾಸ್ಟಿಂಗ್ ಕೌಚ್ ಸೀಮಿತವಾಗಿಲ್ಲ. ಇದೀಗ ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ಕಾಸ್ಟಿಂಗ್ ಕೌಚ್ ಇದೆ ಎಂದೂ ಅವರು ನುಡಿದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net