ಆ ನಿರ್ದೇಶಕ ಕೊಟ್ಟ ಕಿರುಕುಳ ಅಷ್ಟಿಷ್ಟಲ್ಲ: ಸ್ಯಾಂಡಲ್​ವುಡ್​ನಲ್ಲಿ ಮತ್ತೆ ME TOO- ನಟಿ ಆಶಿತಾ ಕಣ್ಣೀರು

ashita
Published on

ಬೆಂಗಳೂರು: ಚಿತ್ರರಂಗದಲ್ಲಿ ನಟಿಯರು ಅನುಭವಿಸುತ್ತಿರುವ ಲೈಂಗಿಕ ಕಿರುಕುಳದ ಕುರಿತಂತೆ ಮೀ ಟೂ (ME TOO) 2018ರಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು. ನಟಿ ಶ್ರುತಿ ಹರಿಹರನ್​ ಅವರು ತಮಗಾಗಿರುವ ಕಹಿ ಅನುಭವಗಳನ್ನು ಬಿಚ್ಚಿಡುತ್ತಲೇ ಹಲವು ನಟಿಯರು ಸೇರಿದಂತೆ ವಿವಿಧ ಕ್ಷೇತ್ರಗಳ ಮಹಿಳೆಯರು ಮೀ ಟೂ ಅಭಿಯಾನವನ್ನೇ ಶುರು ಮಾಡಿದ್ದರು.

ಇದಾದ ಬಳಿಕ ಈ ಅಭಿಯಾನ ಸ್ವಲ್ಪ ತಣ್ಣಗಾಗುತ್ತಾ ಬಂದಿತು. ಈಗ ಮತ್ತೆ ಸ್ಯಾಂಡಲ್​ವುಡ್​ ನಟಿ ಆಶಿತಾ ಚಿತ್ರರಂಗದಲ್ಲಿ ತಮಗಾಗಿರುವ ಕಹಿ ಅನುಭವಗಳನ್ನು ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. 'ಬಾ ಬಾರೋ ರಸಿಕ' ಖ್ಯಾತಿಯ ಆಶಿತಾ, 'ರೋಡ್ ರೊಮಿಯೋ' ಸಿನಿಮಾದ ಬಳಿಕ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ಇದಕ್ಕೆ ತಾವು ಚಿತ್ರರಂಗದಲ್ಲಿ ಅನುಭವಿಸಿರುವ ಕಹಿ ಘಟನೆಗಳೇ ಕಾರಣ ಎಂದು ಅವರು "ದಿಗ್ವಿಜಯಕ್ಕೆ" ನೀಡಿರುವ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಅನೇಕ ವರ್ಷದ ಬಳಿಕ ಮತ್ತೆ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲು ತಯಾರಿ ನಡೆಸಿರುವ ಆಶಿತಾ, ನಿರ್ದೇಶಕರೊಬ್ಬರು ತಮಗೆ ನೀಡಿರುವ ಕಿರುಕುಳದ ಕುರಿತು ಹೇಳಿದ್ದಾರೆ. ಆ ನಿರ್ದೇಶಕರ ಹೆಸರು ಹೇಳದ ಆಶಿತಾ, 'ಆ ನಿರ್ದೇಶಕರ ಹೆಸರು ಸದ್ಯ ಬೇಡ, ಆದರೆ ಅವರಿಂದ ನಾನು ಸಾಕಷ್ಟು ಕಿರುಕುಳ ಅನುಭವಿಸಿದೆ. ಅವರು ತನ್ನೊಂದಿಗೆ ಸಲುಗೆಯಿಂದ ಇರಲು ನನಗೆ ಪದೇ ಪದೇ ಹೇಳುತ್ತಿದ್ದರು. ಅದಕ್ಕೆ ಒಪ್ಪದಾಗ ಸಾಕಷ್ಟು ಅವಮಾನ ಮಾಡಿದರು. ಟೇಕ್ ಚೆನ್ನಾಗಿ ಬಂದರೂ, ಮತ್ತೆ ರಿಟೇಕ್ ಮಾಡಿಸುತ್ತಿದ್ದರು. ಇದೆಲ್ಲದರಿಂದ ನಾನು ಬೇಸತ್ತಿದ್ದೆ' ಎಂದು ಆಶಿತಾ ಹೇಳಿದ್ದಾರೆ.

'ಸರ್, ಸರ್, ಸರ್ ಅನ್ನಬೇಕು, ಮೆಸೇಜ್ ಮಾಡಬೇಕು, ಹಾಯ್ ಅಂತ ಹೇಳ್ತಾ ಇರಬೇಕು. ಇದನ್ನೆಲ್ಲ ನಾನು ಮಾಡ್ತಾ ಇರ್ಲಿಲ್ಲ. ಇದಕ್ಕಾಗಿ ನನಗೆ ಅವರು ಸಾಕಷ್ಟು ಕಷ್ಟ ಕೊಟ್ಟರು. ಸಿನಿ ಪಯಣದಲ್ಲಿ ಪೀಕ್ ನಲ್ಲಿ ಇದ್ದಾಗ ಆಗಿದ್ದು. ದೊಡ್ಡ ದೊಡ್ಡ ಕಲಾವಿದರ ಜೊತೆ ಕೆಲಸ ಮಾಡಿದಾಗ ನನಗೆ ಏನು ಆಗಿರ್ಲಿಲ್ಲ. ಹೊಸಬರು ಜೊತೆ ಕೆಲಸ ಮಾಡುವಾಗ ಇಂಥ ಕೆಟ್ಟ ಅನುಭವವಾಗಿದೆ' ಎಂದು ಹೇಳಿದ್ದಾರೆ.

'ಈಗಲೂ ನಟಿಸುವ ಆಸಕ್ತಿ ಇದೆ. ಉತ್ತಮ ಪಾತ್ರ ಸಿಕ್ಕರೆ ಸಿನಿಮಾಗೆ ವಾಪಸ್​ ಬರುವೆ' ಎಂದ ನಟಿ, 'ಸಿನಿಮಾ ರಂಗದಲ್ಲಿ ಗುರುತಿಸಿಕೊಂಡ ನನ್ನಂಥವಳಿಗೆ ಹೀಗಾಗಿರುವಾಗ, ಇನ್ನು ಹೊಸ ಹುಡುಗಿಯರು ಎಷ್ಟು ಕಷ್ಟ ಪಟ್ಟಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ.

ಅಂದಹಾಗೆ ಆಶಿತಾ, ಮುಂಬೈನಲ್ಲಿ ಜನಿಸಿ ಬೆಂಗಳೂರಿನಲ್ಲಿ ಬೆಳೆದವರು. ಎಂಬಿಎ ಪದವಿ ಪಡೆದಿರುವ ಇವರು ತಮ್ಮ ಮೊದಲ ಬ್ಯೂಟಿ ಕಂಟೆಸ್ಟ್ ಗೆದ್ದದ್ದು 16ನೇ ವಯಸ್ಸಿನಲ್ಲಿ. ನಂತರ ಮಿಸ್ ಬ್ಲಾಸಮ್ -1998, ಮಿಸ್ ಎಕ್ಷೋಟಿಕಾ- 1999 , ಮಿಸ್ ಮಿಲೇನಿಯಂ - 2000 ಸ್ಪರ್ಧೆಗಳಲ್ಲಿ ವಿಜೇತರಾದರು. `ಬಾ ಬಾ ಬಾರೋ ರಸಿಕ' ಸೇರಿದಂತೆ ತವರಿನ ಸಿರಿ, ಆಕಾಶ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್)

ಇಲ್ಲಿದೆ ನೋಡಿ ನಟಿಯ ಮಾತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net