

ನವದೆಹಲಿ: ಅಕ್ರಮ ಆಸ್ತಿ ವರ್ಗಾವಣೆ, 200 ಕೋಟಿ ರೂ. ಸುಲಿಗೆ ಪ್ರಕರಣ ಸೇರಿದಂತೆ ಹಲವಾರು ವಂಚನೆ ಪ್ರಕರಣದಲ್ಲಿ ಸಿಲುಕಿರುವ ಸುಕೇಶ್ ಚಂದ್ರಶೇಖರ್ ಎಂಬಾತನಿಗೆ ಕಿಸ್ ಕೊಟ್ಟು ಭಾರಿ ವಿವಾದದಲ್ಲಿ ಸಿಲುಕಿರುವ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗವು ನಿನ್ನೆಯಿಂದ (ಬುಧವಾರ) ವಿಚಾರಣೆ ಶುರು ಮಾಡಿದೆ.
ಸುಕೇಶ್ನ ಸ್ನೇಹ ಬೆಳೆಸಿ ಆತನಿಂದ ದುಬಾರಿ ಕುದುರೆ, ಜಿಮ್ ಉಡುಗೆಗಾಗಿ ಗುಚಿ ಬಟ್ಟೆಗಳು, ಶೂಗಳು, ರೋಲೆಕ್ಸ್ ವಾಚ್, 15 ಜೋಡಿ ಕಿವಿಯೋಲೆಗಳು, 5 ದುಬಾರಿ ಬ್ಯಾಗ್ಗಳು, ಹರ್ಮ್ಸ್ ಬಳೆಗಳು ಮತ್ತು ಎಲ್ವಿ ಬ್ಯಾಗ್ಗಳು ಸೇರಿದಂತೆ ಕೋಟ್ಯಂತರ ರೂಪಾಯಿಗಳ ದುಬಾರಿ ಗಿಫ್ಟ್ ಪಡೆದಿರುವ ಆರೋಪ ಜಾಕ್ವೆಲಿನ್ ಮೇಲಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.
ಈ ತನಿಖೆ ವೇಳೆ ಸುಕೇಶ್ ನೀಡುವ ದುಬಾರಿ ಗಿಫ್ಟ್ ಆಸೆಗೆ ಬಿದ್ದು, ಆತನ ಸ್ನೇಹ ಬೆಳೆಸಿಕೊಂಡಿರುವವರು ಜಾಕ್ವೆಲಿನ್ ಮಾತ್ರವಲ್ಲದೇ ಇನ್ನೂ ನಾಲ್ವರು ನಟಿಯರೂ ಸೇರಿದ್ದಾರೆ ಎಂಬ ಅಂಶ ಇದೀಗ ತನಿಖಾಧಿಕಾರಿಗಳಿಗೆ ತಿಳಿದುಬಂದಿದೆ. ಉಡುಗೊರೆಗಾಗಿ ಸುಕೇಶ್ ಜತೆ ಅತಿ ನಿಕಟದಲ್ಲಿ ಸ್ನೇಹ ಬೆಳೆಸಿದ್ದ ಇನ್ನೂ ನಾಲ್ವರು ನಟಿಮಣಿಗಳು, ವಂಚನೆ ಆರೋಪದಡಿ ತಿಹಾರ್ ಜೈಲಿನಲ್ಲಿ ಬಂಧಿಸಿದ್ದ ಸುಕೇಶ್ನನ್ನು ಭೇಟಿಯಾಗಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಸುಕೇಶ್ನ ಅತಿ ಹತ್ತಿರದ ಸ್ನೇಹಿತೆ ಪಿಂಕಿ ಇರಾನಿಯೇ ಜಾಕ್ವೆಲಿನ್ ಸೇರಿದಂತೆ ಉಳಿದ ನಟಿಯರನ್ನು ಸುಕೇಶ್ಗೆ ಪರಿಚಯ ಮಾಡಿಸಿಕೊಟ್ಟಿರುವುದು ತಿಳಿದುಬಂದಿದೆ. ಸುಕೇಶ್ನ ನಿಜವಾದ ಹೆಸರನ್ನು ಮರೆಮಾಚಿ ಒಬ್ಬೊಬ್ಬ ನಟಿಗೆ ಒಂದೊಂದು ಹೆಸರಿನಿಂದ ಪಿಂಕಿ ಪರಿಚಯ ಮಾಡಿಸುತ್ತಿದ್ದಳು. ಆತನ ಐಷಾರಾಮಿ ಬಂಗಲೆ, ಬಂಗಲೆಯಲ್ಲಿನ ಸಿರಿವಂತಿಕೆ ಎಲ್ಲವನ್ನೂ ನೋಡುವ ಈ ಯುವತಿಯರು ನಂತರ ಆತನ ಸ್ನೇಹ ಬೆಳೆಸಿ ಅವನು ಹೇಳಿದ್ದಂತೆ ಕೇಳುತ್ತಿರುವ ಅಂಶ ತನಿಖೆಯಿಂದ ಬಯಲಾಗಿದೆ. ಇದರ ಬದಲಿಗೆ ಸುಕೇಶ್ ಈ ಎಲ್ಲರಿಗೂ ಅತಿ ದುಬಾರಿಯಾಗಿರುವ ಉಡುಗೊರೆ ನೀಡುತ್ತಿದ್ದ.
ಈ ಕುರಿತು ನಟಿಯರು ಕೂಡ ಒಪ್ಪಿಕೊಂಡಿದ್ದಾರೆ. ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳುವ ಮೂಲಕ ಪಿಂಕಿ ತಮ್ಮನ್ನು ಸುಕೇಶ್ಗೆ ಪರಿಚಯ ಮಾಡಿಸಿರುವುದಾಗಿ ಕೆಲ ನಟಿಯರು ಹೇಳಿದ್ದಾರೆ. ಇದಾಗಲೇ ಪಿಂಕಿಯನ್ನು ಕೂಡ ತನಿಖಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಏನಿದು ಕೇಸ್? ಯಾರೀ ಸುಕೇಶ್ ಚಂದ್ರಶೇಖರ್?
ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜೆ. ಜಯಲಲಿತಾ ಅವರ ಕುಟುಂಬದಿಂದ ತಾನು ಬಂದವನು ಎಂದು ಹೇಳಿಕೊಂಡಿದ್ದ ಈ ಸುಕೇಶ್ ಚಂದ್ರಶೇಖರ್ ಜಾಕ್ವೆಲಿನ್ ಜತೆ ಸ್ನೇಹ ಬೆಳೆಸಲು ಮುಂದಾಗಿದ್ದ. ತನ್ನ ಹೆಸರನ್ನು ಸುರೇಶ್ ಎಂದು ಹೇಳಿಕೊಂಡಿದ್ದ. ಜಾಕ್ವೆಲಿನ್ ಜತೆ ಸ್ನೇಹ ಬೆಳೆಸುವುದು ಸುಲಭದ ಮಾತಾಗಿರಲಿಲ್ಲ. ಆದ್ದರಿಂದ ಈತ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಕಚೇರಿ ಸಂಖ್ಯೆಯನ್ನು ನಕಲು ಮಾಡಿ ಜಾಕ್ವೆಲಿನ್ ಅವರನ್ನು ಸಂಪರ್ಕಿಸಿದ್ದಾನೆ. ನಂತರ ಆಕೆಯ ಸ್ನೇಹ ಬೆಳೆಸಿದ್ದಾನೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತಂತೆ ಜಾಕ್ವೆಲಿನ್ ಅವರ ಹೇಳಿಕೆಯನ್ನೂ ಪಡೆದುಕೊಳ್ಳಲಾಗಿದೆ. ‘ನಾನು ನಿಮ್ಮ ದೊಡ್ಡ ಅಭಿಮಾನಿ, ದಕ್ಷಿಣದ ಚಲನಚಿತ್ರೋದ್ಯಮದಲ್ಲಿ ಸಿನಿಮಾ ಮಾಡಬೇಕು. ಸನ್ ಟಿವಿಯಾಗಿ ನಾನು ಅನೇಕ ಯೋಜನೆಗಳನ್ನು ಹೊಂದಿದ್ದೇನೆ. ನಾನು ಜಯಲಲಿತಾ ಕುಟುಂಬಸ್ಥ, ಚೆನ್ನೈನಲ್ಲಿ ವಾಸವಾಗಿದ್ದೇನೆ’ ಎಂದು ಈತ ಜಾಕ್ವೆಲಿನ್ಗೆ ಹೇಳಿದ್ದಾನೆ. ನಂತರ ಆಕೆಯ ಮೇಕಪ್ ಆರ್ಟಿಸ್ಟ್ಗೆ ಗೃಹ ಸಚಿವ ಅಮಿತ್ ಷಾ ಅವರ ಕಚೇರಿಯಿಂದ ಕರೆ ಬಂದಂತೆ ಕರೆ ಮಾಡಿದ್ದಾನೆ. ಆ ಮೂಲಕ ಸುಕೇಶ್ ಸರ್ಕಾರದಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಯಾಗಿದ್ದಾನೆ ಎಂದು ಜಾಕ್ವೆಲಿನ್ ತಿಳಿದುಕೊಂಡು ಮೋಸ ಹೋಗಿದ್ದಾರೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.
ಸುಕೇಶ್ ಚಂದ್ರಶೇಖರ್ ರೋಹಿಣಿ ಜೈಲಿನಲ್ಲಿದ್ದಾಗ, ಫೋನ್ ವಂಚನೆ ತಂತ್ರಜ್ಞಾನವನ್ನು ಬಳಸಿಕೊಂಡು ಸುಲಿಗೆ ದಂಧೆಯನ್ನು ನಡೆಸುತ್ತಿದ್ದ. ಈತ ವಂಚನೆಯ ಮಾಸ್ಟರ್ಮೈಂಡ್. 17 ನೇ ವಯಸ್ಸಿನಿಂದಲೂ ಅಪರಾಧ ಜಗತ್ತಿನ ಭಾಗವಾಗಿದ್ದಾರೆ. ಅವರ ವಿರುದ್ಧ ಅನೇಕ ಎಫ್ಐಆರ್ಗಳಿವೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ. ಜೈಲಿನಲ್ಲಿ ಇರುವಾಗಲೂ ತಂತ್ರಜ್ಞಾನದ ಸಹಾಯದಿಂದ ಜನರನ್ನು ವಂಚಿಸುತ್ತಿದ್ದ. ಕರೆ ಮಾಡಿದ ಫೋನ್ ಸಂಖ್ಯೆಯ ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ಸೇರಿದ್ದು ಎಂಬಂತೆ ಕರೆ ಮಾಡಿದವರಿಗೆ ನಂಬರ್ ಡಿಸ್ಪ್ಲೇ ಆಗುತ್ತಿತ್ತು. ಇದರಿಂದ ಎಲ್ಲರೂ ಮೋಸ ಹೋಗುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)