

ನವದೆಹಲಿ: ಅಕ್ರಮ ಆಸ್ತಿ ವರ್ಗಾವಣೆ, 200 ಕೋಟಿ ರೂ. ಸುಲಿಗೆ ಪ್ರಕರಣ ಸೇರಿದಂತೆ ಹಲವಾರು ವಂಚನೆ ಪ್ರಕರಣದಲ್ಲಿ ಸಿಲುಕಿರುವ ಸುಕೇಶ್ ಚಂದ್ರಶೇಖರ್ ಎಂಬಾತನಿಗೆ ಕಿಸ್ ಕೊಟ್ಟು ಭಾರಿ ವಿವಾದದಲ್ಲಿ ಸಿಲುಕಿರುವ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗವು ಇಂದಿನಿಂದ ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ಸುಕೇಶ್ ಚಂದ್ರಶೇಖರ್ನಿಂದ ಕೋಟಿ ಕೋಟಿ ರೂಪಾಯಿಗಳ ಬೆಲೆ ಬಾಳುವ ಗಿಫ್ಟ್ ಪಡೆದು ಜಾರಿ ನಿರ್ದೇಶನಾಲಯದ ಬಲೆಗೆ ಬಿದ್ದಿರುವ ಈ ರಾ...ರಾ... ರಕ್ಕಮ್ಮ ನಟಿ ವಿರುದ್ಧ ಇದಾಗಲೇ ಚಾರ್ಜ್ಷೀಟ್ ಸಲ್ಲಿಕೆ ಮಾಡಲಾಗಿದೆ. ನಟಿಯನ್ನು ಆರೋಪಿಯನ್ನಾಗಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಇಂದು ಇವರ ವಿಚಾರಣೆ ನಡೆಸಲಾಗುತ್ತಿದೆ.
ಇವರ ಜತೆ, ಪ್ರಕರಣದ ಇನ್ನೋರ್ವ ಆರೋಪಿ ಪಿಂಕಿ ಇರಾನಿಯ ತನಿಖೆ ಕೂಡ ನಡೆಸಲಾಗುತ್ತಿದೆ. ಜಾಕ್ವೆಲಿನ್‌ಗೆ ಸುಕೇಶ್ ಚಂದ್ರಶೇಖರ್ನನ್ನು ಪರಿಚಯ ಮಾಡಿಸಿ ಇಬ್ಬರ ಸ್ನೇಹ ಸಂಬಂಧ ಮುಂದುವರೆಯುವಂತೆ ಮಾಡಿರುವ ಪಿಂಕಿ ವಿರುದ್ಧ ಇದಾಗಲೇ ಅನುಮಾನಗಳ ಹುತ್ತ ಹುಟ್ಟಿಕೊಂಡಿರುವ ಹಿನ್ನೆಲೆಯಲ್ಲಿ ಇವರ ವಿರುದ್ಧವೂ ತನಿಖೆ ನಡೆಸಲಾಗುತ್ತಿದೆ. ಬೆಳಗ್ಗೆ 11:30 ರಿಂದ ವಿಚಾರಣೆ ಆರಂಭವಾಗಿದ್ದು, ರಾತ್ರಿ 8:30 ವರೆಗೆ ವಿಚಾರಣೆ ನಡೆಯುವ ಸಾಧ್ಯತೆಗಳಿದೆ. ಒಟ್ಟು ಮೂರು ಹಂತಗಳಲ್ಲಿ ವಿಚಾರಣೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.
ಆರೋಪಿ ಸುಕೇಶ್ನೊಂದಿಗಿನ ನಟಿ ಜಾಕ್ವೆಲಿನ್ ಹೊಂದಿರುವ ಸಂಬಂಧ, ಅವರಿಂದ ಪಡೆದ ಉಡುಗೊರೆ, ಸುಕೇಶ್‌ನನ್ನು ಎಷ್ಟು ಬಾರಿ ಭೇಟಿಯಾಗಿದ್ದರು, ಫೋನ್‌ನಲ್ಲಿ ಎಷ್ಟು ಬಾರಿ ಸಂಪರ್ಕಿಸಿದ್ದರು ಎಂಬ ಬಗ್ಗೆ ಪ್ರಶ್ನೆಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸುಕೇಶ್ ಜತೆ ಜಾಕ್ವೆಲಿನ್ ಡೇಟಿಂಗ್ ಮಾಡುತ್ತಿರುವುದಾಗಿ ಆರೋಪ ಕೇಳಿಬಂದಿತ್ತು. ಇದಕ್ಕೆ ಪುಷ್ಟಿ ನೀಡಲು ಎಂಬಂತೆ ಇಬ್ಬರೂ ಕಿಸ್ ಮಾಡುತ್ತಿರುವ ಫೋಟೋ ವೈರಲ್ ಆಗಿ ನಟಿ ಕೂಡ ಈಗ ವಿಚಾರಣೆ ಎದುರಿಸುವಂತಾಗಿದೆ. ಇದರ ಆಳಕ್ಕೆ ಹೋಗಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಈ ಸುಕೇಶ್ ಕುರಿತಂತೆ ಇನ್ನಷ್ಟು ಮಾಹಿತಿ ಸಿಕ್ಕಿತ್ತು. ಆತ ಜಾಕ್ವೆಲಿನ್ ಮಾತ್ರವಲ್ಲದೇ ಕೆಲವು ನಟಿಯರನ್ನು ಹೇಗೆ ಬಲೆಗೆ ಬೀಳಿಸಿಕೊಂಡ ಎಂಬ ಬಗ್ಗೆ ಮಾಹಿತಿ ಸಿಕ್ಕಿತ್ತು. 200 ಕೋಟಿ ರೂ. ಸುಲಿಗೆ ಪ್ರಕರಣಕ್ಕೂ ತಮಗೂ ಸಂಬಂಧ ಇಲ್ಲ ಎಂದು ಇದಾಗಲೇ ನಟಿ ಜಾಕ್ವೆಲಿನ್ ಇದಾಗಲೇ ಹೇಳಿದ್ದಾರೆ. ಆದರೆ ತನಿಖೆ ಕೈಗೊಂಡಿರುವ ಪೊಲೀಸರಿಗೆ ಈಕೆಯ ವಿರುದ್ಧವೂ ಕೆಲವೊಂದು ದಾಖಲೆಗಳು ಸಿಕ್ಕಿದ್ದು, ಈ ಹಿನ್ನೆಲೆಯಲ್ಲಿ ಆರೋಪಿಯನ್ನಾಗಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಇದಾಗಲೇ ಜಾಕ್ವೆಲಿನ್ ಆಸ್ತಿಯನ್ನು ಜಪ್ತಿ ಮಾಡಿದೆ. ಮೂಲಗಳ ಪ್ರಕಾರ, 7.27 ಕೋಟಿ ಮೌಲ್ಯದ ಸ್ಥಿರ ಠೇವಣಿ ಮೌಲ್ಯದ ವಸ್ತುಗಳು ಮತ್ತು ಆಸ್ತಿಯನ್ನು ತನಿಖಾ ಸಂಸ್ಥೆ ಜಪ್ತಿ ಮಾಡಿದೆ. ಅಂದಹಾಗೆ, ಸುಕೇಶ್ ಚಂದ್ರಶೇಖರ್ ಜಾಕ್ವೆಲಿನ್‌ಗೆ ಹಲವು ಐಷಾರಾಮಿ ಉಡುಗೊರೆಗಳನ್ನು ನೀಡಿದ್ದಾನೆ. ಇದರಲ್ಲಿ ದುಬಾರಿ ಕುದುರೆ, ಜಿಮ್ ಉಡುಗೆಗಾಗಿ ಗುಚಿ ಬಟ್ಟೆಗಳು, ಶೂಗಳು, ರೋಲೆಕ್ಸ್ ವಾಚ್, 15 ಜೋಡಿ ಕಿವಿಯೋಲೆಗಳು, 5 ದುಬಾರಿ ಬ್ಯಾಗ್‌ಗಳು, ಹರ್ಮ್ಸ್ ಬಳೆಗಳು ಮತ್ತು ಎಲ್‌ವಿ ಬ್ಯಾಗ್‌ಗಳು ಸೇರಿವೆ.
ಏನಿದು ಕೇಸ್? ಯಾರೀ ಸುಕೇಶ್ ಚಂದ್ರಶೇಖರ್?
ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜೆ. ಜಯಲಲಿತಾ ಅವರ ಕುಟುಂಬದಿಂದ ತಾನು ಬಂದವನು ಎಂದು ಹೇಳಿಕೊಂಡಿದ್ದ ಈ ಸುಕೇಶ್ ಚಂದ್ರಶೇಖರ್ ಜಾಕ್ವೆಲಿನ್ ಜತೆ ಸ್ನೇಹ ಬೆಳೆಸಲು ಮುಂದಾಗಿದ್ದ. ತನ್ನ ಹೆಸರನ್ನು ಸುರೇಶ್ ಎಂದು ಹೇಳಿಕೊಂಡಿದ್ದ. ಜಾಕ್ವೆಲಿನ್ ಜತೆ ಸ್ನೇಹ ಬೆಳೆಸುವುದು ಸುಲಭದ ಮಾತಾಗಿರಲಿಲ್ಲ. ಆದ್ದರಿಂದ ಈತ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಕಚೇರಿ ಸಂಖ್ಯೆಯನ್ನು ನಕಲು ಮಾಡಿ ಜಾಕ್ವೆಲಿನ್ ಅವರನ್ನು ಸಂಪರ್ಕಿಸಿದ್ದಾನೆ. ನಂತರ ಆಕೆಯ ಸ್ನೇಹ ಬೆಳೆಸಿದ್ದಾನೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತಂತೆ ಜಾಕ್ವೆಲಿನ್ ಅವರ ಹೇಳಿಕೆಯನ್ನೂ ಪಡೆದುಕೊಳ್ಳಲಾಗಿದೆ. ‘ನಾನು ನಿಮ್ಮ ದೊಡ್ಡ ಅಭಿಮಾನಿ, ದಕ್ಷಿಣದ ಚಲನಚಿತ್ರೋದ್ಯಮದಲ್ಲಿ ಸಿನಿಮಾ ಮಾಡಬೇಕು. ಸನ್ ಟಿವಿಯಾಗಿ ನಾನು ಅನೇಕ ಯೋಜನೆಗಳನ್ನು ಹೊಂದಿದ್ದೇನೆ. ನಾನು ಜಯಲಲಿತಾ ಕುಟುಂಬಸ್ಥ, ಚೆನ್ನೈನಲ್ಲಿ ವಾಸವಾಗಿದ್ದೇನೆ’ ಎಂದು ಈತ ಜಾಕ್ವೆಲಿನ್‌ಗೆ ಹೇಳಿದ್ದಾನೆ. ನಂತರ ಆಕೆಯ ಮೇಕಪ್ ಆರ್ಟಿಸ್ಟ್‌ಗೆ ಗೃಹ ಸಚಿವ ಅಮಿತ್ ಷಾ ಅವರ ಕಚೇರಿಯಿಂದ ಕರೆ ಬಂದಂತೆ ಕರೆ ಮಾಡಿದ್ದಾನೆ. ಆ ಮೂಲಕ ಸುಕೇಶ್ ಸರ್ಕಾರದಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಯಾಗಿದ್ದಾನೆ ಎಂದು ಜಾಕ್ವೆಲಿನ್ ತಿಳಿದುಕೊಂಡು ಮೋಸ ಹೋಗಿದ್ದಾರೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.
ಸುಕೇಶ್ ಚಂದ್ರಶೇಖರ್ ರೋಹಿಣಿ ಜೈಲಿನಲ್ಲಿದ್ದಾಗ, ಫೋನ್ ವಂಚನೆ ತಂತ್ರಜ್ಞಾನವನ್ನು ಬಳಸಿಕೊಂಡು ಸುಲಿಗೆ ದಂಧೆಯನ್ನು ನಡೆಸುತ್ತಿದ್ದ. ಈತ ವಂಚನೆಯ ಮಾಸ್ಟರ್‌ಮೈಂಡ್. 17 ನೇ ವಯಸ್ಸಿನಿಂದಲೂ ಅಪರಾಧ ಜಗತ್ತಿನ ಭಾಗವಾಗಿದ್ದಾರೆ. ಅವರ ವಿರುದ್ಧ ಅನೇಕ ಎಫ್‌ಐಆರ್‌ಗಳಿವೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ. ಜೈಲಿನಲ್ಲಿ ಇರುವಾಗಲೂ ತಂತ್ರಜ್ಞಾನದ ಸಹಾಯದಿಂದ ಜನರನ್ನು ವಂಚಿಸುತ್ತಿದ್ದ. ಕರೆ ಮಾಡಿದ ಫೋನ್ ಸಂಖ್ಯೆಯ ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ಸೇರಿದ್ದು ಎಂಬಂತೆ ಕರೆ ಮಾಡಿದವರಿಗೆ ನಂಬರ್ ಡಿಸ್ಪ್ಲೇ ಆಗುತ್ತಿತ್ತು. ಇದರಿಂದ ಎಲ್ಲರೂ ಮೋಸ ಹೋಗುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)