

ಕೃಷ್ಣಾ (ಆಂಧ್ರಪ್ರದೇಶ): ಕಾರನ್ನು ಎಲ್ಲಿಯಾದರೂ ಪಾರ್ಕ್ ಮಾಡಿ ಹೋಗುವ ಸಂದರ್ಭದಲ್ಲಿ ಸರಿಯಾಗಿ ಲಾಕ್ ಮಾಡಿಕೊಂಡು ಹೋಗುವುದನ್ನು ಮರೆಯಬೇಡಿ. ಸಮೀಪವೇ ಹೋಗಿ ಬರುವುದು ಎಂದುಕೊಂಡು, ಸರಿಯಾಗಿ ಲಾಕ್ ಮಾಡದೇ ಹೋದರೆ, ಅದು ಮಕ್ಕಳ ಜೀವವನ್ನೇ ಬಲಿ ಪಡೆಯಬಹುದು!
ಹೌದು. ಇಂಥದ್ದೇ ಒಂದು ದುರ್ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ. ಖಾಸಗಿ ಕಾರ್ಖಾನೆಯ ಪಾರ್ಕಿಂಗ್ನಲ್ಲಿ ನಿಲ್ಲಿಸಲಾಗಿದ್ದ ಕಾರಿನೊಳಗೆ ಹೋಗಿದ್ದ ಮಕ್ಕಳು ಅಲ್ಲಿಯೇ ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಖಾಸಗಿ ಕಾರ್ಖಾನೆಯ ಕಂಪನಿಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಮಕ್ಕಳಾದ ಸುಹನಾ ಪರ್ವೀನ್, ರಿಂಪ ಯಾಸ್ಮೀನ್, ಹಸೀನಾ ಮೃತ ದುರ್ದೈವಿಗಳಾಗಿದ್ದಾರೆ. ಮೃತ ಮಕ್ಕಳೆಲ್ಲರೂ 6ರಿಂದ 7 ವರ್ಷದ ಒಳಗಿನವರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕಾರಿನ ಪಾರ್ಕಿಂಗ್ ಜಾಗದಲ್ಲಿ ಮಕ್ಕಳು ಆಡವಾಡುತ್ತಿದ್ದರು. ಅಲ್ಲಿಯೇ ಇರುವ ಕಾರನ್ನು ಮಕ್ಕಳು ನೋಡಿದ್ದಾರೆ. ಬಾಗಿಲು ತೆರೆದಾಗ ಅದು ಓಪನ್ ಆಗಿದೆ. ಮಕ್ಕಳು ಒಳಗೆ ಸೇರಿಬಿಟ್ಟಿದ್ದಾರೆ. ಈ ಸಮಯದಲ್ಲಿ ಅದು ಆಟೊಮ್ಯಾಟಿಕ್ ಆಗಿ ಲಾಕ್ ಆಗಿಬಿಟ್ಟಿದೆ.
ಮಕ್ಕಳು ಒಳಗಡೆಯಿಂದ ಚೀರಿಕೊಂಡರೂ ಯಾರಿಗೂ ಅದು ಕೇಳಿಸಲೇ ಇಲ್ಲ. ಪಾರ್ಕಿಂಗ್ ಜಾಗದ ಸುತ್ತಲೂ ಜನರು ಇಲ್ಲದಿದ್ದ ಕಾರಣ, ಯಾರಿಗೂ ಇದು ತಿಳಿದುಬರಲೇ ಇಲ್ಲ. ಹಲವು ಸಮಯ ಕಿರುಚಾಡಿಕೊಂಡಿದ್ದ ಮಕ್ಕಳು ನಂತರ ಅಲ್ಲಿಯೇ ಉಸಿರುಗಟ್ಟಿ ಸತ್ತಿದ್ದಾರೆ.
ನಂತರ ಮಾಲೀಕ ಬಂದು ಕಾರಿನ ಬಾಗಿಲು ತೆರೆದು ನೋಡಿದಾಗಲೇ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಬಾಪುಲವಾಡ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ಹಿಂದೆ ಕೂಡ ಇಂಥ ಘಟನೆಗಳು ಕೆಲವು ಕಡೆಗಳಲ್ಲಿ ವರದಿಯಾಗಿದ್ದು, ವಾಹನ ಮಾಲೀಕರು ತುಂಬಾ ಜಾಗರೂಕರಾಗಿ ಇರುವಂತೆ ಪೊಲೀಸರು ಹೇಳಿದ್ದಾರೆ.