ಪತ್ನಿಗೆ ಅಡುಗೆ ಮಾಡಲು ಬರಲ್ಲ ಅಂತ ಆತ್ಮಹತ್ಯೆ ಮಾಡಿಕೊಂಡ ಬಳ್ಳಾರಿ ನವವಿವಾಹಿತ

hanging
Published on

ಬಳ್ಳಾರಿ: ಈ ಸುದ್ದಿಯನ್ನು ಓದಿದರೆ ನಿಜಕ್ಕೂ ಎಂತೆಂಥ ಮನಸ್ಥಿತಿಯವರು ಇರುತ್ತಾರಪ್ಪಾ ಎಂದು ಅನ್ನಿಸದೇ ಇರಲಾರದು. ಜೀವನದಲ್ಲಿ ಎಷ್ಟೊಂದು ಸಮಸ್ಯೆಗಳು ಬಂದರೂ ಎದೆಗುಂದದೇ ಅದನ್ನು ಧೈರ್ಯದಿಂದ ಎದುರಿಸುವವರು ಎಷ್ಟೋ ಮಂದಿ ಇದ್ದಾರೆ.

ಆದರೆ ಪತ್ನಿಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ ಎಂದು ಮನನೊಂದು ಪ್ರಾಣ ಕಳೆದುಕೊಳ್ಳುತ್ತಾರೆ ಎಂದು ನಂಬುವಿರಾ?

ಇಂಥದ್ದೊಂದು ವಿಚಿತ್ರ ಹಾಗೂ ದೌರ್ಭಾಗ್ಯದ ಘಟನೆಯೊಂದು ಬಳ್ಳಾರಿಯಲ್ಲಿ ನಡೆದಿದೆ. ಮದುವೆಯಾಗಿ ನಾಲ್ಕೇ ತಿಂಗಳಿಗೆ ಈ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ!

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುರುಳಿಹಾಳ್ ಗ್ರಾಮದ ಶರಣೇಶ (29) ಎಂಬಾತ ಈ ದುಡುಕಿನ ನಿರ್ಧಾರ ತೆಗೆದುಕೊಂಡಿರುವ ಯುವಕ. ನಾಲ್ಕು ತಿಂಗಳ ಹಿಂದೆಯಷ್ಟೆ ಕುಟುಂಬದವರು ನಿಶ್ಚಯಿಸಿದ್ದ ಯುವತಿಯೊಂದಿಗೆ ವಿವಾಹವಾಗಿದ್ದನು. ಪಾಲಕರ ಇಚ್ಛೆಯಂತೆ ಮದುವೆಯಾಗಿದ್ದ ಶರಣೇಶ್‌ಗೆ ತನ್ನ ಪತ್ನಿ ಒಳ್ಳೊಳ್ಳೆ ಅಡುಗೆ ಮಾಡಿ ಬಡಿಸಬೇಕು ಎಂಬ ಕನಸಿತ್ತು.

ಆದರೆ ಆಕೆಗೆ ಸರಿಯಾಗಿ ಅಡುಗೆ ಮಾಡಲು ಬರುತ್ತಿರಲಿಲ್ಲ. ಇದರಿಂದ ಶರಣೇಶ‌ ತುಂಬಾ ನೊಂದುಕೊಂಡಿದ್ದ. ಮದುವೆಯಾಗಿ ನಾಲ್ಕು ತಿಂಗಳಾದರೂ ಅಡುಗೆಯನ್ನು ಆಕೆ ಸರಿಯಾಗಿ ಮಾಡಲು ಕಲಿತಿಲ್ಲ ಎನ್ನುವ ಅಸಮಾಧಾನ ತುಂಬಾ ಆತನನ್ನು ಕಾಡುತ್ತಿತ್ತು.

ಹೀಗಾಗಿ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಇದೇ ವಿಷಯವಾಗಿ ದಂಪತಿ ನಡುವೆ ಆಗಾಗ್ಗೆ ಜಗಳ ಕೂಡ ಆಗುತ್ತಿತ್ತು.

ಇಂದು ಇದರಿಂದ ಮನನೊಂದ ನವ ವಿವಾಹಿತ ಶರಣೇಶ ತನ್ನ ಗ್ರಾಮ ಹೊರವಲಯದಲ್ಲಿರುವ ಹೊಲದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ‌‌ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net