

ಲಾಲ್‌ಪುರ (ಉತ್ತರಪ್ರದೇಶ): ಭೀಕರ ಅಪಘಾತವೊಂದರಲ್ಲಿ ದರ್ಗಾಕ್ಕೆ ಹೋಗುತ್ತಿದ್ದ ಐವರು ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ಉತ್ತರಾಖಂಡದ ಲಾಲ್‌ಪುರ ಗ್ರಾಮದಲ್ಲಿ ನಡೆದಿದೆ. ಕಾರು ಮತ್ತು ಟ್ಯಾಂಕರ್ ನಡುವೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದ್ದು, ಮೃತಪಟ್ಟವರೆಲ್ಲರೂ ಕಾರಿನಲ್ಲಿ ಇದ್ದರು.
ಮೃತಪಟ್ಟವರೆಲ್ಲರೂ ಉತ್ತರಾಖಂಡದ ರಾಮ್ ನಗರದ ನಿವಾಸಿಗಳು ಎಂದು ಗುರುತಿಸಲಾಗಿದೆ. ಇವರೆಲ್ಲರೂ ವ್ಯಾಪಾರಿಗಳಾಗಿದ್ದು, ದರ್ಗಾಕ್ಕೆ ತೆರಳುತ್ತಿದ್ದರು. ರಾಮ್ ನಗರದಿಂದ ಬಿಲ್ಗ್ರಾಮ್ ಷರೀಫ್‌ಗೆ ಹೋಗುತ್ತಿದ್ದರು. ಒಟ್ಟೂ ಎರಡು ವಾಹನಗಳಲ್ಲಿ 10 ಮಂದಿ ಪ್ರಯಾಣಿಸುತ್ತಿದ್ದರು.
ಮೃತಪಟ್ಟಿವರನ್ನು ಖೇತಾಡಿ ರಾಮನಗರದ ಸಗೀರ್ (35), ಮೊ.ತಾಹಿರ್ (40) ಹಾಗೂ ಮೊ. ಫರೀದ್ (35) ಹಾಗೂ ಭವಾನಿಗಂಜ್ ನಿವಾಸಿಗಳಾದ ಮುಝಮ್ಮಿಲ್ (36), ಇಮ್ರಾನ್ ಖಾನ್ (38) ಎಂದು ಗುರುತಿಸಲಾಗಿದೆ.
ಲಾಲ್‌ಪುರ ಔಟ್‌ಪೋಸ್ಟ್ ಹೆದ್ದಾರಿ ಬಳಿ ಕಾರು ಪಂಕ್ಚರ್ ಆಗಿಬಿಟ್ಟಿದೆ. ಆ ಸಂದರ್ಭದಲ್ಲಿ ಎದುರಿಗೆ ಟ್ಯಾಂಕರ್ ಬರುತ್ತಿತ್ತು. ಅದಕ್ಕೆ ಡಿಕ್ಕಿ ಹೊಡೆದಿದೆ. ಈ ರಭಸಕ್ಕೆ ಕಾರಿನಲ್ಲಿ ಕುಳಿತಿದ್ದ ಐವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಕಾರಿನಿಂದ ಹೊರ ತೆಗೆದ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. .
ಈ ಘಟನೆ ಕುರಿತು ಇಜ್ಜತ್‌ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.