ಪ್ರಾಣಾಪಾಯದಿಂದ ಪಾರಾದ ಕಿರಣ್​ ರಾಜ್​: ದೃಷ್ಟಿ ಹೆಚ್ಚಾಯ್ತು ಎಂದು ಬರೆದುಕೊಂಡ ನಟ

kiranraj
Published on

ಬೆಂಗಳೂರು: ಕಿರುತೆರೆಯ `ಕನ್ನಡತಿ’ ಸೀರಿಯಲ್ ಮೂಲಕ ಮನೆ ಮಾತಾಗಿರುವ ನಟ ಕಿರಣ್ ರಾಜ್ ಅವರ ಮೊದಲ ಚಿತ್ರ `ಬಡ್ಡೀಸ್’ ಬಿಡುಗಡೆಗೆ ರೆಡಿಯಾಗಿದೆ. ಆದರೆ ಈ ನಡುವೆಯೇ ಭಾರಿ ಆಘಾತಕಾರ ಘಟನೆಯೊಂದು ನಡೆದಿದೆ. ಅದೇನೆಂದರೆ ಚಿತ್ರದ ಪ್ರಮೋಷನ್​ ಸಲುವಾಗಿ ಉತ್ತರ ಕರ್ನಾಟಕದ ಭಾಗಗಳಲ್ಲಿ ತೆರಳುತ್ತಿದ್ದಾಗ ಅವಘಡವೊಂದು ಸಂಭವಿಸಿದೆ.

ಬೆಳಗಾವಿಯ ಕಾಲೇಜ್‌ವೊಂದರಲ್ಲಿ ಭೇಟಿ ನೀಡುವ ವೇಳೆ ಪ್ರಚಾರಕ್ಕಾಗಿ ರೆಡಿ ಮಾಡಿದ್ದ ವಾಹನದ ಮೇಲೆ ವಿದ್ಯುತ್ ಕಂಬ ಬಿದ್ದು, ವಾಹನ ಜಖಂ ಆಗಿದೆ. ಅದೃಷ್ಟವಶಾತ್​ ಕಿರಣ್ ರಾಜ್ ಮತ್ತು ತಂಡ ಅಪಾಯದಿಂದ ಪಾರಾಗಿದ್ದಾರೆ.

ಈ ಕುರಿತು ಇನ್​ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿರುವ ಕಿರಣ್​ ರಾಜ್​, ‘ಹಾಯ್ ಎಲ್ಲರಿಗೂ ನಮಸ್ಕಾರ, ಈ ದಿನ ಇಷ್ಟು ಕಾಲೇಜ್ ಗಳಿಗೆ ಹೋಗುವುದಿತ್ತು, ಬಹುಶಃ ದೃಷ್ಟಿ ಜಾಸ್ತಿನೆ ಆಗಿರಬೇಕು ಅನ್ಸುತ್ತೆ, ಹಾಗಾಗಿ ಈ ತರ ಅನಿರೀಕ್ಷಿತ ಘಟನೆ ಸಂಭವಿಸಿದ ಕಾರಣ, ಕೊನೆ ಕ್ಷಣದಲ್ಲಿ ನಮ್ಮ ಪ್ಲಾನ್ ಚೆಂಜ್ ಮಾಡಬೇಕಾಯಿತು. ದೇವರ ದಯೆಯಿಂದ ಟೀಮ್ ಅವರಿಗೆ ಯಾವುದೇ ಹಾನಿಯಾಗಿಲ್ಲ, ಎಲ್ಲರೂ ಆರಾಮಾಗಿ ಇದ್ದಾರೆ. ಸಿನಿಮಾ ಬಿಡುಗಡೆಯ ನಂತರ theater Visit ಗೆ ಬಂದಾಗ ತಮ್ಮೆಲ್ಲರನ್ನೂ ಖಂಡಿತ ಮಿಸ್ ಮಾಡ್ದೆ ಮೀಟ್ ಮಾಡ್ತೀವಿ ದಯಮಾಡಿ ಕ್ಷಮೆ ಇರಲಿ, ನಿಮ್ಮ ಪ್ರೀತಿ ವಿಶ್ವಾಸ ಸದಾ ನಮ್ಮ ಮೇಲಿರಲಿ, ಮಿಸ್ ಮಾಡದೆ ಸಿನಿಮಾ ನೋಡಿ ಹರಸಿ ಹಾರೈಸಿ ಲವ್ ಯೂ‘ ಎಂದು ಬರೆದುಕೊಂಡಿದ್ದಾರೆ.

ಆಗಿದ್ದೇನು?

ಕಿರಣ್​ ರಾಜ್​ ಮತ್ತು ಅವರ ತಂಡ ಬೆಳಗಾವಿಯಲ್ಲಿ ಒಂದು ಕಾಲೇಜ್‌ಗೆ ಭೇಟಿ ನೀಡಿದ ನಂತರ ಇನ್ನೊಂದು ಕಾಲೇಜಿಗೆ ಭೇಟಿ ಕೊಡಬೇಕಿತ್ತು. ಆಗ ಕಿರಣ್ ರಾಜ್ ಅವರು ಪ್ರಚಾರದ ವಾಹನದಿಂದ ಇಳಿದು, ಅವರ ಕಾರ್‌ನಲ್ಲಿ ಬರುತ್ತಿದ್ದರು. ಬಳಿಕ ಪ್ರಚಾರದ ವಾಹನದವರು ಟೀ ಕುಡಿಯುವ ಸಲುವಾಗಿ ವಾಹನವನ್ನು ನಿಲ್ಲಿಸಿ ಅದರಿಂದ ಇಳಿದಿದ್ದಾರೆ. ಆ ವೇಳೆ ಆ ವಾಹನದ ಮೇಲೆ ಕಂಬ ಬಿದ್ದಿದೆ. ವಾಹನದ ಮುಂಭಾಗ ಫುಲ್ ಜಖಂ ಆಗಿದೆ. ಕಂಬ ಬೀಳುವ ವೇಳೆ ವಾಹನದ ಒಳಗಡೆ ಯಾರೂ ಇರಲಿಲ್ಲ. ಹೀಗಾಗಿ ಯಾವ ಅಪಾಯವೂ ಆಗಿಲ್ಲ.

ಇನ್ನು ‘ಬಡ್ಡೀಸ್‘ ಚಿತ್ರವು ಇದೇ ಜೂನ್ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಮಂಗಳೂರು ಮೂಲದ ಭಾರತಿ ಶೆಟ್ಟಿ ಅವರು ತಮ್ಮ 'ಭಾರತಿ ಶೆಟ್ಟಿ ಫಿಲಂಸ್' ಬ್ಯಾನರ್ ಅಡಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಬಡ್ಡೀಸ್ ಸಿನಿಮಾವನ್ನು ಗುರುತೇಜ್ ಶೆಟ್ಟಿ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಜುಡಾ ಸ್ಯಾಂಡಿ ಸಂಗೀತ ನೀಡುತ್ತಿದ್ದಾರೆ.

ಕಿರಣ್ ರಾಜ್ ಅವರಿಗೆ ನಾಯಕಿಯಾಗಿ ಸಿರಿ ಪ್ರಹ್ಲಾದ್ ಅಭಿನಯಿಸುತ್ತಿದ್ದಾರೆ. ಗೋಪಾಲ್ ದೇಶಪಾಂಡೆ, ಅರವಿಂದ್ ಬೋಳಾರ್, ವಿನಯ್ ರೋಹನ್ ಸಾಯಿ, ಗಿರೀಶ್ ಮುಂತಾದವರು ಸಿನಿಮಾದ ತಾರಾಗಣದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net