

ನ್ಯೂಯಾರ್ಕ್: ವಿಶ್ವದ ಅತಿ ದೊಡ್ಡ ದ್ವೀಪವೆಂದೇ ಬಿಂಬಿತವಾಗಿರುವ ಗ್ರೀನ್‌ಲ್ಯಾಂಡ್‌ನಲ್ಲಿ ಹಿಮಪಾತವು ಸಹಜವೇ.
ಆದರೆ ಈ ಬಾರಿಯ ಉಷ್ಣಾಂಶದ ಕಾವು ಎಷ್ಟಿತ್ತೆಂದರೆ, 586 ಶತಕೋಟಿ ಟನ್‌ನಷ್ಟು ಹಿಮ ಕರಗಿದೆ. ಈ ಕುರಿತು ಅಧ್ಯಯನ ನಡೆಸಿರುವ ತಂಡವೇ ದಂಗಾಗಿ ಹೋಗಿದೆ. ಇದು ಇಷ್ಟು ವರ್ಷಗಳ ದಾಖಲೆಯ ಹಿಮಪಾತ ಎಂದು ವರದಿ ಹೇಳಿದೆ.
ಈ ಕುರಿತು ನೇಚರ್ ಕಮ್ಯುನಿಕೇಷನ್ಸ್ ಅರ್ಥ್ ಆ್ಯಂಡ್ ಎನ್ವಿರಾನ್‌ಮೆಂಟ್' ನಿಯತಕಾಲಿಕದಲ್ಲಿ ಲೇಖನ ಪ್ರಕಟವಾಗಿದೆ.
ಒಂದು ವೇಳೆ ಇಷ್ಟು ಪ್ರಮಾಣದ ಹಿಮವನ್ನು ಕರಗಿಸಿದರೆ ಅದರ ನೀರನ್ನು ಒಂದೆಡೆ ಕಲೆ ಹಾಕಿದರೆ, ಇಡೀ ಕ್ಯಾಲಿಫೋರ್ನಿಯಾ ಸಿಟಿಯೇ ಮುಳುಗಿ ಹೋಗಬಹುದು, ಅಷ್ಟು ಪ್ರಮಾಣದ ಹಿಮಪಾತವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕರಗಿದ ಹಿಮದ ರಾಶಿಯಿಂದ ಸಿಗುವ ನೀರನ್ನು, ಇಡೀ ಕ್ಯಾಲಿಫೋರ್ನಿಯಾ ನಗರದಲ್ಲಿ ನಾಲ್ಕು ಅಡಿಗಳಿಗಿಂತ ಹೆಚ್ಚು ಎತ್ತರ ನಿಲ್ಲಿಸಲು ಸಾಧ್ಯವಾಗುತ್ತಿತ್ತು ಎಂದು ಉಪಗ್ರಹ ಕಳುಹಿಸಿದ ವಿವರಗಳನ್ನು ವಿಶ್ಲೇಷಿಸಿ ವಿಜ್ಞಾನಿಗಳು ಹೇಳಿದ್ದಾರೆ.
ಗ್ರೀನ್‌ಲ್ಯಾಂಡ್‌ನಲ್ಲಿ ಹಿಮ ಕರಗುವ ವಿದ್ಯಮಾನ ಕುರಿತು 1948ರಿಂದಲೂ ಅಧ್ಯಯನ ನಡೆದಿದ್ದರೂ, 2003ರಿಂದ ನಿಖರವಾಗಿ ದಾಖಲಿಸಲಾಗುತ್ತಿದೆ . ಉಪಗ್ರಹ ಕಳಿಸುವ ದತ್ತಾಂಶಗಳನ್ನು ನಾಸಾ ವಿಶ್ಲೇಷಣೆ ಮಾಡುತ್ತಿರುವುದರಿಂದ ಇದು ಸಾಧ್ಯವಾಗಿದೆ ಎನ್ನುತ್ತಾರೆ ಜರ್ಮನಿಯ ಅಲ್ಫ್ರೆಡ್ ವೆಜಿನರ್ ಇನ್‌ಸ್ಟಿಟ್ಯೂಟ್‌ನ ಭೂವಿಜ್ಞಾನಿ ಇಂಗೋ ಸಸ್ಗೇನ್.
2003ರಿಂದ ಈ ಪ್ರದೇಶದಲ್ಲಿ ವಾರ್ಷಿಕ ಸರಾಸರಿ 259 ಶತಕೋಟಿ ಟನ್‌ನಷ್ಟು ಹಿಮ ಕರಗುತ್ತದೆ. 2012ರಲ್ಲಿ ಈ ವಾರ್ಷಿಕ ಸರಾಸರಿಗಿಂತ ಅಧಿಕ, ಅಂದರೆ 511 ಶತಕೋಟಿ ಟನ್‌ನಷ್ಟು ಹಿಮ ಕರಗಿತ್ತು. 2019ರಲ್ಲಿ ಕರಗಿರುವ ಹಿಮದ ಪ್ರಮಾಣ ಈ ಎಲ್ಲ ಹಿಂದಿನ ದಾಖಲೆಗಳನ್ನು ಹಿಂದಕ್ಕೆ ಸರಿಸಿದೆ ಎಂದು ಅವರು ವಿವರಣೆ ನೀಡಿದ್ದಾರೆ.
'ಕಳೆದ ವರ್ಷ ಕರಗಿದ ಹಿಮದಿಂದಾಗಿ ಜಾಗತಿಕವಾಗಿ ಸಮುದ್ರಮಟ್ಟದಲ್ಲಿ 0.06 ಇಂಚುಗಳಷ್ಟು (1.5 ಮಿ.ಮೀ.) ಏರಿಕೆಯಾಗಿದೆ. ಈ ಏರಿಕೆ ಪ್ರಮಾಣ ಅತ್ಯಲ್ಪ ಎನಿಸಿದರೂ, ಅದರಿಂದಾಗುವ ಪರಿಣಾಮ ಅಗಾಧ' ಎನ್ನುತ್ತಾರೆ ನಾಸಾದ ವಿಜ್ಞಾನಿ ಅಲೆಕ್ಸ್ ಗಾರ್ಡನರ್.
https://www.vijayavani.net/s-dog-corona-bite-dead-body /