

ನವದೆಹಲಿ: ದೆಹಲಿಯಲ್ಲಿ ಎರಡು ದಿನಗಳ ಡ್ರೋನ್ ಉತ್ಸವ ನಡೆಯಲಿದ್ದು, ಇಂದು ಅದಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರ ಕೈಯಿಂದ ಚಾಲನೆಯ ಅದೃಷ್ಟ ಒದಗಿ ಬಂದದ್ದು ಬೆಂಗಳೂರಿನ ಡ್ರೋನ್‌ಗೆ. ಬೆಂಗಳೂರಿನ ಫುಲ್ಸ್ಟಾಕ್ ಡ್ರೋನ್ ಟೆಕ್ನಾಲಜಿ ಕಂಪನಿ ಆಸ್ಟೆರಿಯಾ ಏರೋಸ್ಪೇಸ್ ಲಿಮಿಟೆಡ್ ಅಭಿವೃದ್ಧಿ ಪಡಿಸಿದ ಡ್ರೋನ್ ಪ್ರಧಾನಿ ಹಾರಿಸಿದರು.
ಭಾರತದ ಅತಿದೊಡ್ಡ ಡ್ರೋನ್ ಉತ್ಸವ ಇದಾಗಿದೆ. ಬೆಂಗಳೂರಿನ ಡ್ರೋನ್ ಅನ್ನು ಹಾರಿಸಿದ ಬಳಿಕ, ಪ್ರದರ್ಶನ ಸ್ಥಳದಲ್ಲಿದ್ದ ಆಸ್ಟೆರಿಯಾ ಬೂತ್ಗೆ ಭೇಟಿ ನೀಡಿ, ಕಂಪನಿಯ ಡ್ರೋನ್ಗಳ ಬಗ್ಗೆ ತಿಳಿದುಕೊಂಡರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದ ಎಲ್ಲ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಡ್ರೋನ್ಗಳು ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿವೆ. ಅಭಿವೃದ್ಧಿ ಕಾರ್ಯಗಳ ವೀಕ್ಷಣೆಗೆ ಡ್ರೋನ್ ಕ್ಯಾಮೆರಾಗಳ ನೆರವನ್ನು ಪಡೆಯುತ್ತಿದ್ದೇನೆ. ಈ ಮೂಲಕ ಖುದ್ದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವುದನ್ನು ತಪ್ಪಿಸಬಹುದು. ಸಮಯದ ಉಳಿತಾಯವೂ ಆಗುತ್ತದೆ. ವಿಪತ್ತು ನಿರ್ವಹಣೆ, ಕೃಷಿ, ಸರ್ವೇಕ್ಷಣೆ, ಮಾಧ್ಯಮ ಅಥವಾ ಪ್ರವಾಸೋದ್ಯಮ ಹೀಗೆ ಯಾವುದೇ ಕ್ಷೇತ್ರವಾದರೂ ಸಾರ್ವಜನಿಕ ಸೇವೆಯಲ್ಲಿ ಡ್ರೋನ್ಗಳು ಕ್ರಾಂತಿಕಾರಿ ಬದಲಾವಣೆಗಳನ್ನು ತರಬಲ್ಲವು. ಅದೇ ರೀತಿ, ಸರ್ಕಾರಿ ಸೇವೆ ಒದಗಿಸುತ್ತ ಬದುಕನ್ನು ಹಸನುಗೊಳಿಸಬಲ್ಲವು. ಡಿಜಿಟಲ್ ಮ್ಯಾಪಿಂಗ್ನಲ್ಲಿ ಡ್ರೋನ್ಗಳ ನೆರವು ಪಡೆದ ಬಳಿಕ, 65 ಲಕ್ಷ ಆಸ್ತಿ ಕಾರ್ಡ್ಗಳನ್ನು ವಿತರಿಸಲಾಗಿದೆ ಎಂದರು.
ಡ್ರೋನ್ ಉತ್ಸವಕ್ಕೆ ನಾಳೆ (ಶನಿವಾರ) ತೆರೆ ಬೀಳಲಿದೆ. ಸರ್ಕಾರಿ ಅಧಿಕಾರಿಗಳು, ವಿದೇಶಿ ರಾಜತಾಂತ್ರಿಕರು, ಸಶಸ್ತ್ರಪಡೆ, ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ, ಸಾರ್ವಜನಿಕ ವಲಯದ ಸಂಸ್ಥೆಗಳ ಪ್ರತಿನಿಧಿಗಳು, ಖಾಸಗಿ ಕಂಪನಿಗಳ ಪ್ರತಿನಿಧಿಗಳು, ಡ್ರೋನ್ ನವೋದ್ಯಮಗಳ ಪ್ರತಿನಿಧಿಗಳು ಸೇರಿ 1,600ಕ್ಕೂ ಹೆಚ್ಚು ಜನ ಈ ಉತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ. ಉತ್ಸವದಲ್ಲಿ 70ಕ್ಕೂ ಹೆಚ್ಚು ಸ್ಟಾಲ್ಗಳಿವೆ. ವಿವಿಧ ರೀತಿಯ ಡ್ರೋನ್ಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ.