ಅನ್ಯ ಧರ್ಮದವನನ್ನು ಮದುವೆಯಾದ ಮಗಳನ್ನು ಪೊಲೀಸರು ಹುಡುಕಿಕೊಟ್ಟರು: ಅಪ್ಪ-ಅಮ್ಮ ಕೊಲೆ ಮಾಡಿದರು!

death
Published on

ಆದಿಲಾಬಾದ್​: ಮಗಳು ಬೇರೆ ಧರ್ಮದ ವ್ಯಕ್ತಿಯೊಂದಿಗೆ ಮದುವೆಯಾಗಿದ್ದನ್ನು ಸಹಿಸದ ಪಾಲಕರು ಆಕೆಯ ಕತ್ತು ಸೀಳಿ ಕೊಲೆ ಮಾಡಿರುವ ಭಯಾನಕ ಘಟನೆ ತೆಲಂಗಾಣದ ಆದಿಲಾಬಾದ್​​ ಜಿಲ್ಲೆಯ ನಾರ್ನೂರ್​​ ವಲಯದ ನಾಗಕೊಂಡದಲ್ಲಿ ನಡೆದಿದೆ. ಕೆಲ ದಿನಗಳ ಹಿಂದಷ್ಟೇ ತೆಲಂಗಾಣದ ಸರೂರ್​​ನಗರದಲ್ಲಿ ಇದೇ ರೀತಿ ಮರ್ಯಾದಾ ಹತ್ಯೆ ನಡೆದಿತ್ತು. ಇದೀಗ ಈ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ನಾಗಲಕೊಂಡ ಮೂಲದ ಯುವತಿ ಬೇರೆ ಧರ್ಮದವನನ್ನು ಪ್ರೀತಿಸುತ್ತಿದ್ದಳು. ಕುಟುಂಬಸ್ಥರು ವಿರೋಧಿಸಿದ್ದರಿಂದ ಮನೆ ಬಿಟ್ಟ ಯುವತಿ ಆತನನ್ನು ಮದುವೆಯಾಗಿದ್ದಳು. ಸುಮಾರು ಒಂದೂವರೆ ತಿಂಗಳ ಹಿಂದೆ ಈ ಘಟನೆ ನಡೆದಿತ್ತು. ಕೊನೆಗೆ ಯುವತಿ ಪಾಲಕರು ಪೊಲೀಸರಲ್ಲಿ ದೂರು ದಾಖಲು ಮಾಡಿದ್ದರು.

ಈ ಜೋಡಿಗಾಗಿ ಹುಡುಕಾಟ ನಡೆಸಿದ್ದ ಪೊಲೀಸರು ಅವರನ್ನು ಪತ್ತೆಹಚ್ಚಿ ಯುವತಿಯನ್ನು ಮನೆಗೆ ಕರೆದುತಂದಿದ್ದರು. ಇದು ಅಕ್ಕಪಕ್ಕದಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಮನೆಯವರಿಗೆ ಮರ್ಯಾದೆ ಹೋಯಿತು ಎನ್ನಿಸುತ್ತಿತ್ತು. ಇದರಿಂದ ಬೇರೆ ಧರ್ಮದವನ ಜತೆ ಮದುವೆಯಾಗಿರುವುದನ್ನು ಸಹಿಸದೇ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾರೆ.

ಪಾಲಕರ ವಿರುದ್ಧ ಕೇಸ್‌ ದಾಖಲಿಸಿಕೊಳ್ಳಲಾಗಿದೆ. ಪಾಲಕರನ್ನು ಬಂಧಿಸಲಾಗಿದೆ. ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net