

ಲಖನೌ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿಯ ಎಲ್ಲಾ ಆರೋಪಿಗಳೂ ನಿರ್ದೋಷಿಗಳು ಎಂದು ಕೋರ್ಟ್ ಇದಾಗಲೇ ಹೇಳಿಯಾಗಿದೆ. ಆದರೆ ತೀರ್ಪಿನಲ್ಲಿ ಇರುವ ಕೆಲವೊಂದು ಪ್ರಮುಖ ಅಂಶಗಳು ಇದೀಗ ಬಹಿರಂಗಗೊಂಡಿದೆ.
ಧ್ವಂಸ ಪ್ರಕರಣದಲ್ಲಿ ಬಿಜೆಪಿ ಮುಖಂಡರೇ ಭಾಗಿಯಾಗಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂದು ಕೋರ್ಟ್ ಹೇಳಿರುವ ಹಿಂದಿದೆ ಇವೆಲ್ಲಾ ಕಾರಣಗಳು. ತೀರ್ಪಿನ ಕೆಲವು ಅಂಶಗಳು ಇಲ್ಲಿವೆ:
ಕಾರಸೇವೆಯ ನೆಪದಲ್ಲಿ ಅಲ್ಲಿ ವಿಧ್ವಂಸಕ ಕೃತ್ಯ ಎಸಗಲು ಪಾಕಿಸ್ತಾನದ ಕೆಲ ಸಂಘಟನೆಗಳ ಪಾತ್ರಗಳು ಇರುವ ಸಾಧ್ಯತೆ ಇದ್ದು, ಆ ಬಗ್ಗೆ ಗುಪ್ತಚರ ಇಲಾಖೆ ಏಕೆ ತನಿಖೆ ನಡೆಸಿಲ್ಲ ಎಂದು ಸಿಬಿಐ ವಿಶೇಷ ನ್ಯಾಯಾಧೀಶ ಎಸ್.ಕೆ.ಯಾದವ್ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಕನಿಷ್ಠ ಮೂರು ಬಾರಿ ಈ ಪ್ರಶ್ನೆಗಳನ್ನು ಅವರು ತಮ್ಮ ಸುದೀರ್ಘ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
1992ರಲ್ಲಿ ನಡೆದ ಕಾರಸೇವೆಯ ಸಮಯದಲ್ಲಿ ವಿವಾದಿತ ಸ್ಥಳದಲ್ಲಿ ಪಾಕಿಸ್ತಾನದ ಏಜೆನ್ಸಿಗಳು ಕಾರಸೇವಕರ ಹೆಸರಿನಲ್ಲಿ ಬಂದು ವಿಧ್ವಂಸಕ ಕೃತ್ಯ ಎಸಗಿರುವ ಎಲ್ಲಾ ಸಾಧ್ಯತೆಗಳು ಇವೆ. ಈ ಬಗ್ಗೆ ಆ ದಿನಗಳಲ್ಲಿಯೇ ಈ ಬಗ್ಗೆ ಅಧಿಕಾರಿ ಮಟ್ಟದಲ್ಲಿ ಸಾಕಷ್ಟು ಚರ್ಚೆ ಆಗಿದ್ದವು. ಆದರೆ ತನಿಖಾ ಏಜೆನ್ಸಿಗಳು ಮಾತ್ರ ಈ ಬಗ್ಗೆ ಏಕೆ ಫಾಲೋಅಪ್ ಮಾಡಿಲ್ಲ? ಈ ಮೌನವೇಕೆ ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ.
ಈ ರೀತಿ ಪ್ರಶ್ನಿಸಲು ಕಾರಣವೇನೆಂದರೆ, 1992ರ ಡಿ.6ರಂದು ನಡೆದಿರುವ ವಿಧ್ವಂಸಕ ಘಟನೆಯ ದಿನ, ಕಾರಸೇವಕರ ಹೆಸರಿನಲ್ಲಿ ಕೆಲವು ಸಮಾಜ ವಿರೋಧಿ ಮತ್ತು ರಾಷ್ಟ್ರ ವಿರೋಧಿ ಜನರು ಬಂದು ಗಲಾಟೆ ನಡೆಸುವ ಸಂಭವವಿದೆ. ಅಂದು ವಿಧ್ವಂಸಕರು ಬಂದು ಸೇರಬಹುದು ಎಂದು ಗುಪ್ತಚರ ಇಲಾಖೆ ಮೊದಲೇ ಹೇಳಿದ್ದವು. ಸ್ಫೋಟಕಗಳನ್ನು ತರುವ ಸಾಧ್ಯತೆ ಇದ್ದು, ಗಲಭೆ ಸೃಷ್ಟಿಸಬಹುದು ಎಂದು ಅಂದಿನ ಇನ್ಸ್‌ಪೆಕ್ಟರ್ ಜನರಲ್ ಆಫ್ ಸೆಕ್ಯುರಿಟಿ (ಸೆಕ್ಯುರಿಟಿ) ಆರ್.ಸಿ.ಮಲಿಕ್ ಅವರಿಗೆ ಎಲ್ಲ ರೀತಿಯ ಮಾಹಿತಿ ಇದ್ದವು. ಹೀಗಿದ್ದರೂ ಇಂಥ ಕೃತ್ಯ ನಡೆದಾಗ ಅದರ ಫಾಲೋಅಪ್ ಮಾಡದೇ ಇರಲು ಕಾರಣವೇನು ಎಂಬುದು ನ್ಯಾಯಾಧೀಶರ ಪ್ರಶ್ನೆ.
ವಿಧ್ವಂಸಕ ಕೃತ್ಯದ ಮಾಹಿತಿಯನ್ನು ಗೃಹ ಪ್ರಧಾನ ಕಾರ್ಯದರ್ಶಿ ಅವರೊಂದಿಗೆ ಆಗ ಹಂಚಿಕೊಳ್ಳಲಾಗಿತ್ತು. ಅಷ್ಟೇ ಅಲ್ಲದೇ, ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು, ವಿಧ್ವಂಸಕ ಕೃತ್ಯದ ಮೊದಲ ದಿನವೇ ವಿಧ್ವಂಸಕ ಕೃತ್ಯದ ಸಾಕಷ್ಟು ಪುರಾವೆಗಳು ಸಿಕ್ಕಿದ್ದವು. ಇವುಗಳ ಹೊರತಾಗಿಯೂ, ಸಂಬಂಧಿತ ಸಂಗತಿಗಳ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಇದಕ್ಕೆ ಕಾರಣವೇನು ಎಂದು ತೀರ್ಪಿನಲ್ಲಿ ಪ್ರಶ್ನಿಸಿದ್ದಾರೆ.
ಈ ಬಗ್ಗೆ ತೀರ್ಪಿನಲ್ಲಿ ಅಂಡರ್ಲೈನ್ ಮಾಡಿರುವ ನ್ಯಾಯಾಧೀಶರು, ಪರಿಸ್ಥಿತಿ ಹೀಗಿದ್ದರೂ, ಇವುಗಳ ಬಗ್ಗೆ ಸಿಬಿಐ ಸಾಕ್ಷಿಗಳ ಹೇಳಿಕೆ ದಾಖಲು ಮಾಡುವಾಗ ಪ್ರಶ್ನೆಗಳನ್ನು ಏಕೆ ಹಾಕಿಲ್ಲ? ವಿಧ್ವಂಸಕ ಕೃತ್ಯದ ಮಾಹಿತಿ ಪಡೆದಿರುವ ಮೊದಲ ಮಾಹಿತಿದಾರ, ವಲಯ ಅಧಿಕಾರಿ ಅಥವಾ ಜಿಲ್ಲೆಯ ಸಹಾಯಕ ಪೊಲೀಸ್ ಆಯುಕ್ತರಿಗೆ ಈ ಬಗ್ಗೆ ಏಕೆ ಪ್ರಶ್ನಿಸಿಲ್ಲ ಎಂದು ಕೇಳಿದ್ದಾರೆ.
ಅದೇ ವೇಳೆ, ಸಿಬಿಐ ನೀಡಿರುವ ಸಾಕ್ಷಿಗಳ ಪಟ್ಟಿಯಲ್ಲಿ ಸಿಆರ್ಪಿಎಫ್ ಅಧಿಕಾರಿಯೊಬ್ಬರು ನೀಡಿರುವ ಹೇಳಿಕೆಯನ್ನು ಹೈಲೈಟ್ ಮಾಡಿರುವ ನ್ಯಾಯಾಧೀಶರು, ಕಾರಸೇವಕರ ವೇಷದಲ್ಲಿ ಸಮಾಜವಿರೋಧಿ ಜನರ ಬಗ್ಗೆ ಉಲ್ಲೇಖ ಮಾಡಿರುವುದನ್ನು ತೀರ್ಪಿನಲ್ಲಿ ಪ್ರಸ್ತಾಪಿಸಿದ್ದಾರೆ.
ಅಷ್ಟೇ ಅಲ್ಲದೇ, ವಿಧ್ವಂಸಕ ಪ್ರಕರಣದಲ್ಲಿ ಯಾವುದಾದರೂ ಸ್ಫೋಟಕಗಳನ್ನು ಬಳಸಲಾಗಿದೆಯೇ ಎಂದು ಪರೀಕ್ಷಿಸಲು ಘಟನೆಯ 10 ದಿನಗಳ ನಂತರ ಸ್ಥಳದ ಪರಿಶೀಲನೆ ನಡೆಸಲಾಗಿದೆ. ಆದರೆ ವಿಚಾರಣೆಯ ಸಮಯದಲ್ಲಿ ವಶಪಡಿಸಿಕೊಂಡ ಯಾವುದೇ ವಸ್ತುಗಳನ್ನು ಕೋರ್ಟ್ ಮುಂದೆ ಇಡದ ಔಚಿತ್ಯವನ್ನೂ ನ್ಯಾಯಾಧೀಶರು ಪ್ರಶ್ನಿಸಿದ್ದಾರೆ.