ಬಾಬ್ರಿ ಮಸೀದಿ ತೀರ್ಪು: ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಮುಸ್ಲಿಂ ಸಂಘದ ತಯಾರಿ

babri-appeal
Published on

ಲಖನೌ: 28 ವರ್ಷಗಳ ಹಳೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪಿನಿಂದ ಬಿಜೆಪಿ ನಾಯಕರು ನಿರಾಳರಾಗಿದ್ದಾರೆ. ಧ್ವಂಸ ಮಾಡಿರುವುದು ಉದ್ದೇಶಪೂರ್ವಕವಾಗಿ ಅಲ್ಲ, ಅದು ಆಕಸ್ಮಿಕ ಎಂದು ನ್ಯಾಯಾಧೀಶ ಎಸ್​.ಕೆ.ಯಾದವ್​ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಈ ಮೂಲಕ ಎಲ್ಲಾ 32 ಆರೋಪಿಗಳನ್ನೂ ಖುಲಾಸೆಗೊಳಿಸಲಾಗಿದೆ.

ಆದರೆ ಈ ತೀರ್ಪನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಆಲ್​ ಇಂಡಿಯಾ ಮುಸ್ಲಿಂ ಲಾ ಬೋರ್ಡ್​) ಖಂಡಿಸಿದೆ. ಆದ್ದರಿಂದ ಪ್ರಕರಣದ ತೀರ್ಪಿನ ಕುರಿತು ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಇದು ನಿರ್ಧರಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಬಾಬರಿ ಕ್ರಿಯಾ ಸಮಿತಿಯ ಸಂಚಾಲಕ ಮತ್ತು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಜಫರ್ಯಾಬ್ ಜಿಲಾನಿ ನಾವು ಕೋರ್ಟ್​ ತೀರ್ಪಿನಿಂದ ತೃಪ್ತರಾಗಿಲ್ಲ. ಆದ್ದರಿಂದ ಇದನ್ನು ಪ್ರಶ್ನಿಸಿ ಹೈಕೋರ್ಟ್​ ಮೊರೆ ಹೋಗಲಿದ್ದೇವೆ ಎಂದಿದ್ದಾರೆ. ಇದೇ ವೇಳೆ ಪ್ರಕರಣದ ತನಿಖೆಯನ್ನು ಮತ್ತೊಮ್ಮೆ ನಡೆಸುವಂತೆ ಸಿಬಿಐಗೆ ಕೋರಿಕೊಳ್ಳಲೂ ಸಂಘಟನೆ ತೀರ್ಮಾನಿಸಿರುವುದಾಗಿ ಅವರು ಹೇಳಿದ್ದಾರೆ.

ಅದೇ ಮತ್ತೊಂದೆಡೆ, ಸಿಬಿಐ ಕೂಡ ತೀರ್ಪಿನ ವಿರುದ್ಧ ಹೈಕೋರ್ಟ್​ ಮೊರೆ ಹೋಗಲು ಸಿದ್ಧತೆ ನಡೆಸಿರುವುದಾಗಿ ತಿಳಿದುಬಂದಿದೆ. ಆದರೆ ಈ ಬಗ್ಗೆ ಯಾವುದೇ ರೀತಿಯ ಅಧಿಕೃತ ಮಾಹಿತಿ ಹೊರಬಂದಿಲ್ಲ.

1992ರ ಡಿಸೆಂಬರ್‌ 6ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ವಿವಾದಿತ ರಾಮ ಜನ್ಮಭೂಮಿ ಪ್ರದೇಶದಲ್ಲಿದ್ದ ಬಾಬರಿ ನಿರ್ಮಿತ ಮಸೀದಿಯನ್ನು ಕಾರಸೇವಕರು ಧ್ವಂಸಗೊಳಿಸಿರುವ ಆರೋಪ ಹೊತ್ತ ಪ್ರಕರಣ ಇದಾಗಿದೆ.

ಮಸೀದಿ ಧ್ವಂಸ ಪ್ರಕರಣಕ್ಕೂ ಮೊದಲು ಅಂದರೆ 1990ರಲ್ಲಿ ಗೋಪ್ಯ ಸಭೆಯೊಂದು ಬಿಜೆಪಿ ನಾಯಕ ವಿನಯ್ ಕಟಿಯಾರ್ ಮನೆಯಲ್ಲಿ ನಡೆದಿತ್ತು. ಈ ಸಭೆಯಲ್ಲಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಹೀಗೆ ಮಸೀದಿ ಕೆಡವಲು ಅಡ್ವಾಣಿ ಮತ್ತು ಇತರರು ಸಂಚು ರೂಪಿಸಿದ್ದರು ಎಂದು ಸಿಬಿಐ ತನ್ನ ಜಾರ್ಜ್​ಷೀಟ್​ನಲ್ಲಿ ಹೇಳಿತ್ತು.

ಆದರೆ ಇವೆಲ್ಲಾ ಆರೋಪಗಳನ್ನೂ ಕೋರ್ಟ್​ ತಳ್ಳಿಹಾಕಿದ್ದು, ಇದು ಉದ್ದೇಶಪೂರ್ವಕವಾಗಿ ನಡೆದದ್ದಲ್ಲ. ಆದ್ದರಿಂದ ಆರೋಪಿಗಳ ವಿರುದ್ಧ ಮಾಡಿರುವ ಎಲ್ಲಾ ಆರೋಪಗಳೂ ನಿರಾಧಾರ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net