

ರಾಯಪುರ: ಕೆಲ ಹೆಣ್ಣುಮಕ್ಕಳಿಗೆ ಮನೆಯೂ ಸುರಕ್ಷಿತವಲ್ಲ ಎಂಬ ಮಾತು ಈಗೀಗ ಹೆಚ್ಚು ಪ್ರಚಾರಗೊಳ್ಳುತ್ತಿದೆ. ಅದಕ್ಕೆ ಉದಾಹರಣೆಯಾಗಿ ಶಾಕಿಂಗ್ ಸುದ್ದಿಯೊಂದು ಛತ್ತೀಸಗಢದ ಬಿಲಾಸ್ಪುರದಲ್ಲಿ ನಡೆದಿದೆ.
21 ಮತ್ತು 13 ವರ್ಷದ ಇಬ್ಬರು ಹೆಣ್ಣುಮಕ್ಕಳ ಮೇಲೆ ತಂದೆಯೇ 7 ವರ್ಷಗಳ ಕಾಲ ನಿರಂತರ ಅತ್ಯಾಚಾರ ಎಸಗಿರುವ ಘಟನೆ ಇದಾಗಿದೆ. ಅಂತೂ ಕೊನೆಗೆ ಸತ್ಯ ಬಯಲಾಗಿದ್ದು, ಕಾಮುಕ ತಂದೆಯನ್ನು ಬಂಧಿಸಲಾಗಿದೆ.
ಆಗಿದ್ದೇನೆಂದರೆ, ಈ ಇಬ್ಬರು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡುಮಕ್ಕಳನ್ನು ತಂದೆಯ ಜತೆಗೆ ಬಿಟ್ಟು ಏಳು ವರ್ಷಗಳ ಹಿಂದೆ ಮಕ್ಕಳ ತಾಯಿ ಮನೆಬಿಟ್ಟು ಹೋಗಿದ್ದಾಳೆ. ಅಲ್ಲಿಂದಲೇ ಶುರುವಾಗಿದ್ದು, ತಂದೆಯ ಕಾಮುಕತನ.
ಒಂದೆಡೆ ಕಡುಬಡತನ, ಇನ್ನೊಂದೆಡೆ ತಂದೆಯ ವಿರುದ್ಧದ ಹೇಯ ಕೃತ್ಯ ಹೇಳಿಕೊಳ್ಳಲು ಭಯ. ಇಷ್ಟು ವರ್ಷ ಈ ಮಕ್ಕಳು ತಂದೆಯ ಅತ್ಯಾಚಾರವನ್ನು ಸಹಿಸಿಕೊಳ್ಳುತ್ತಾ ಬಂದಿದ್ದಾರೆ. ಇವರ ಸಹೋದರರೂ ಮರ್ಯಾದೆಗೆ ಅಂಜಿ ಎಲ್ಲಿಯೂ ವಿಷಯವನ್ನು ಬಾಯಿ ಬಿಟ್ಟಿರಲಿಲ್ಲ.
ಸ್ನಾನಕ್ಕೆಂದು ಮಕ್ಕಳು ಹೋಗುವ ಸಮಯದಲ್ಲಿ ಅವರ ಹಿಂದೆಯೇ ಹೋಗುತ್ತಿದ್ದ ಈ ಕಾಮುಕ ತಂದೆ, ಅಲ್ಲಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎನ್ನಲಾಗಿದೆ.
ಈ ವಿಷಯ ಬೆಳಕಿಗೆ ಬಂದದ್ದು ಲಾಕ್ಡೌನ್ನಿಂದಾಗಿ. ಕರೊನಾ ಹಾಗೂ ಲಾಕ್ಡೌನ್ನಿಂದಾಗಿ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭದಲ್ಲಿ ಬಾಲಕಿಯರ ಸಹೋದರರು ಸಹಾಯವಾಣಿ ಸಂಪರ್ಕಿಸಿ ನೆರವು ಕೋರಿದ್ದಾರೆ.
ಸಹಾಯವಾಣಿ ತಂಡದ ಅಧಿಕಾರಿಗಳು ಮನೆಗೆ ಬಂದಾಗ ಬಾಲಕಿಯರು ಈ ಘನಘೋರ ಕೃತ್ಯವನ್ನು ಬಿಚ್ಚಿಟ್ಟಿದ್ದಾರೆ. ಶಾಕ್ ಆಗಿರುವ ಅಧಿಕಾರಿಗಳು ಅಪ್ಪನಿಂದ ಮಕ್ಕಳ ರಕ್ಷಣೆ ಮಾಡಿದ್ದಾರೆ.
ಈಗ ಆತನನ್ನು ಬಂಧಿಸಲಾಗಿದ್ದು, ಭಾರತೀಯ ದಂಡ ಸಂಹಿತೆ(ಐಪಿಸಿ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೋ) ಕಾಯ್ದೆ ಸಂಬಂಧಿತ ಪ್ರಕರಣಗಳನ್ನು ದಾಖಲು ಮಾಡಿಕೊಂಡಿದ್ದಾರೆ.